ಪೊಲೀಸ್ ಇನ್ಸಪೆಕ್ಟರ್ ಸಜೀವ ದಹನ ಪ್ರಕರಣದ ಬೆನ್ನಲ್ಲೇ “ಅಗ್ನಿ ಅವಘಡ” 23 ಜನ ಬೆಂಕಿಗೆ ಆಹುತಿ…!!!
ಗೋವಾ: ಉತ್ತರ ಗೋವಾದ ಅರ್ಪೋರಾ ಪ್ರದೇಶದಲ್ಲಿರುವ ಜನಪ್ರಿಯ ನೈಟ್‌ಕ್ಲಬ್ ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟ ಭಾರೀ ದುರಂತಕ್ಕೆ ಕಾರಣವಾಗಿದೆ. ಸ್ಫೋಟ ನಂತರ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಸಂಪೂರ್ಣ ಕ್ಲಬ್ ಬೂದಿಯಾಗಿದೆ.ಈ ದುರ್ಘಟನೆಯಲ್ಲಿ 23 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಘಟನೆಯ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಹಂಚಿಕೊಂಡಿದ್ದು, ಮೃತರಲ್ಲಿ ಹೆಚ್ಚಿನವರು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೆಯೇ, ಮೂವರು–ನಾಲ್ವರು ಪ್ರವಾಸಿಗರೂ ಮೃತ ಪಟ್ಟಿದ್ದಾರೆ ಎಂದು CM ತಿಳಿಸಿದ್ದಾರೆ.
ಬೆಂಕಿ ಅವಘಡವಾದಾಗ ಮೂವರು ನೇರವಾಗಿ ಸುಟ್ಟ ಗಾಯಗಳಿಂದ ಮೃತಪಟ್ಟರೆ, ಉಳಿದವರು ಗಾಢ ಹೊಗೆಯಿಂದ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿರುವುದು ವೈದ್ಯಕೀಯ ವರದಿ ಸೂಚಿಸಿದೆ. ನೈಟ್‌ಕ್ಲಬ್ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕು ಕಂಡಿದೆ ಎಂದು CM ಸಾವಂತ್ ಹೇಳಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಕ್ಲಬ್ ನಿರ್ವಹಣೆ ಮತ್ತು ಅವರಿಗೆ ಅನುಮತಿ ನೀಡಿದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ರಾತ್ರಿ 12 ಗಂಟೆ ಸುಮಾರಿಗೆ ರೆಸ್ಟೋರೆಂಟ್-ಕಮ್-ಕ್ಲಬ್‌ನಲ್ಲಿ ಸಂಭವಿಸಿದ ಸ್ಫೋಟಕ್ಕೆ ನಂತರ ಕೆಲವು ನಿಮಿಷಗಳಲ್ಲಿ ಬೆಂಕಿ ಭುಗಿಲೆದ್ದಿದ್ದು, ಸ್ಥಳದಲ್ಲಿದ್ದವರು ಆಫ್ತಾಗಿ ಹೊರಬರುವ ಪ್ರಯತ್ನ ಮಾಡಿದರು. ಆದರೆ ಬೆಂಕಿ ವೇಗವಾಗಿ ವ್ಯಾಪಿಸಿದ್ದರಿಂದ ಹಲವರು ಒಳಗೇ ಸಿಲುಕಿದರು. ಆಗ್ನಿಶಾಮಕ ದಳ ಮತ್ತು ಪೊಲೀಸರು ಶೀಘ್ರ ಸ್ಥಳಕ್ಕೆ ಧಾವಿಸಿ ರಾತ್ರಿಯಿಡೀ ರಕ್ಷಣಾಕಾರ್ಯ ನಡೆಸಿದರು.
ಶಾಸಕ ಮೈಕೆಲ್ ಲೋಬೊ ಅವರು, ಈ ಘಟನೆಯ ನಂತರ ರಾಜ್ಯದ ಎಲ್ಲಾ ಕ್ಲಬ್‌ಗಳಲ್ಲಿ ಅಗ್ನಿ ಸುರಕ್ಷತಾ ಪರವಾನಗಿ ಪರಿಶೀಲನೆ ನಡೆಸಲಾಗುವುದಾಗಿ ಸ್ಪಷ್ಟಪಡಿಸಿದ್ದಾರೆ. ಪರವಾನಗಿ ಇಲ್ಲದ ಕ್ಲಬ್‌ಗಳ ಕಾರ್ಯಾಚರಣೆಗೆ ತಡೆ ವಿಧಿಸುವುದಾಗಿ ಅವರು ತಿಳಿಸಿದ್ದಾರೆ.
ಗೋವಾ ಡಿಜಿಪಿ ಅಲೋಕ್ ಕುಮಾರ್ ಅವರು ಮಧ್ಯರಾತ್ರಿ 12:04 ಕ್ಕೆ ಮೊದಲ ಮಾಹಿತಿ ಬಂದಿದ್ದು, ತಕ್ಷಣ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಆಂಬ್ಯುಲೆನ್ಸ್ ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ. ಬೆಂಕಿ ಈಗ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, 23 ಶವಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಕಿ ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾಜ್ಯವನ್ನು ನಡುಗಿಸಿದ ಈ ದುರಂತಕ್ಕೆ ಶೋಕಸಂದೇಶಗಳು ವ್ಯಕ್ತವಾಗುತ್ತಿದ್ದು, ಪೀಡಿತ ಕುಟುಂಬಗಳಿಗೆ ಸರ್ಕಾರವು ನೆರವಿನ ಭರವಸೆ ನೀಡಿದೆ.
