ಹೊಗೆ ತಂದ ಆಪತ್ತು: ಬೆಂಕಿಯಲ್ಲಿ ಬೆಂದ ಕುಟುಂಬ- ಆಸ್ಪತ್ರೆಯಲ್ಲೂ ನೋಡದ ಸಿಬ್ಬಂದಿ
1 min readಗದಗ: ಆ ತಾಯಿ ತನ್ನ ಪ್ರೀತಿಯ ಮಗುವಿನೊಂದಿಗೆ ಸಹೋದರಿ ಊರಿಗೆ ಹೊರಟಿದ್ಲು. ಆದ್ರೆ ಆ ರಸ್ತೆಯಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಅಂಥಹದರಲ್ಲೇ ಸಂಚಾರ ಆರಂಭಗೊಂಡಿದೆ. ರಸ್ತೆ ಸರಿಯಾಗಿ ಕಾಣದ ಹಿನ್ನೆಲೆಯಲ್ಲಿ ಆಯತಪ್ಪಿ ಬೈಕ್ ಸಮೇತ ಮೂವರು ಬೆಂಕಿಯಲ್ಲಿ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದು, ಅಲ್ಲಿಂದ ಜಿಮ್ಸ್ ಆಸ್ಪತ್ರೆಗೆ ಬಂದ್ರೆ ಇಲ್ಲಿಯೂ ನಿರ್ಲಕ್ಷ್ಯ ಮಾಡಿದ್ದರಿಂದ ಕುಟುಂಬ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ರಸ್ತೆಯಲ್ಲಿ ಬೆಂಕಿ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಒಂದೂವರೆ ವರ್ಷದ ಮಗು ಅನನ್ಯ, 30 ವರ್ಷದ ತಾಯಿ ಅಕ್ಕಮಹಾದೇವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರೋಣ-ಜಕ್ಕಲಿ ನಡುವೆ ರಸ್ತೆ ಪಕ್ಕದಲ್ಲಿಯ ಕಟ್ಟಿಗೆ ಬೆಂಕಿ ಹಚ್ಚಲಾಗಿದೆ. ಹೀಗಾಗಿ ರಸ್ತೆ ತುಂಬೆಲ್ಲಾ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇಂಥ ಹೊಗೆಯಲ್ಲೇ ಸಂಬಂಧಿ ನಾಗರಾಜ್ ಜೊತೆ ಬೈಕ್ ನಲ್ಲಿ ಸಹೋದರಿ ಭೇಟಿಗೆ ಮಗುವಿನೊಂದಿಗೆ ಅಕ್ಕಮಹಾದೇವಿ ಹೊರಟಿದ್ದಾಳೆ.
ಈ ವೇಳೆ ಬೈಕ್ ನಿಂದ ತಾಯಿ-ಮಗು ಜರಿದು ಬೆಂಕಿಯಲ್ಲಿ ಬಿದ್ದಿದ್ದಾರೆ. ಆಗ ತಕ್ಷಣ ನಾಗರಾಜ್ ಬೈಕ್ ಬಿಟ್ಟು ಮಗು, ತಾಯಿಯನ್ನು ರಕ್ಷಣೆ ಮಾಡಿದ್ದಾನೆ. ಅಷ್ಟರಲ್ಲೇ ಮಗು, ತಾಯಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಮಗುವಿನ ಕೈ, ಬೆನ್ನು ಸೇರಿ ದೇಹ ಸುಟ್ಟಿದೆ. ಇನ್ನೂ ತಾಯಿಗೂ ಗಂಭೀರ ಗಾಯವಾಗಿದೆ.
ವಿಪರ್ಯಾಸವೆಂದರೆ ಗದಗ ಜಿಮ್ಸ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ಬಂದ್ರೂ ತುರ್ತು ಚಿಕಿತ್ಸಾ ಘಟಕಕ್ಕೆ ಶಿಫ್ಟ್ ಮಾಡದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಜಿಮ್ಸ್ ಆಸ್ಪತ್ರೆಯಲ್ಲಿನ ಅಮಾನವೀಯ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಕಿಯಲ್ಲಿ ಬೆಂದ ಮಗು, ತಾಯಿ 15ನಿಮಿಷಕ್ಕೂ ಹೆಚ್ಚು ಕಾಲ ಆ್ಯಂಬುಲೆನ್ಸ್ ನಲ್ಲೇ ನರಳಾಡಿದ್ರೂ ಡೋಂಟ್ ಕೇರ್ ಎಂದಿದ್ದಾರೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಸಂಬಂಧಿಕರು ಕಣ್ಣೀರು ಹಾಕಿದ್ದಾರೆ. ವೈದ್ಯರ ನಿರ್ಲಕ್ಷ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.