Posts Slider

Karnataka Voice

Latest Kannada News

ನಟ ಹುಲಿವಾನ ಗಂಗಾಧರಯ್ಯ ಸಾವು: ಮದುಮೇಹ-ಕೊರೋನಾದಿಂದ ನಿಧನ

1 min read
Spread the love

ಬೆಂಗಳೂರು: ನಟ ಹುಲಿವಾನ ಗಂಗಾಧರಯ್ಯ ಇನ್ನಿಲ್ಲ
ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ನಟ ಹುಲಿವಾನ್ ಗಂಗಾಧರಯ್ಯ (70 ವರ್ಷ) ಅಗಲಿದ್ದಾರೆ. ವಾರದ ಹಿಂದೆ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆ ಹುಲಿವಾನ ಅವರ ಹುಟ್ಟೂರು. ಕನ್ನಡ ರಂಗಭೂಮಿ ಪ್ರಮುಖವಾಗಿ ಗುರುತಿಸುವ ಹಲವಾರು ನಾಟಕಗಳ ವಿಭಿನ್ನ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ‘ಸೇಡಿನ ಹಕ್ಕಿ’ (1985) ಚಿತ್ರದೊಂದಿಗೆ ಸಿನಿಮಾರಂಗ ಪ್ರವೇಶಿಸಿದ ಅವರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ ಕಿರುತೆರೆಯ ಹಲವು ಧಾರಾವಾಹಿಗಳು, ಟೆಲಿಫಿಲ್ಮ್ಗಳಲ್ಲಿ ನಟಿಸಿದ್ದಾರೆ. ಕೃಷಿ ಬಗ್ಗೆ ಅಪಾರ ಒಲವಿದ್ದ ಅವರು ಹುಟ್ಟೂರಿನಲ್ಲಿ “ಕೋಕನಟ್ ಪ್ರೊಡ್ಯೂಸರ್ಸ್ ಕಂಪನಿ’ ಸ್ಥಾಪಿಸಿ ರೈತರಿಗಾಗಿ ಕೆಲಸ ಮಾಡುತ್ತಿದ್ದರು.
ಹುಲಿವಾನ ಗಂಗಾಧರಯ್ಯ ಅವರು ಪದವಿ ಓದಿದ್ದು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ. ಅಲ್ಲಿ ಉತ್ತಮ ರಂಗಭೂಮಿ ವಾತಾವರಣವಿತ್ತು. ಉಪನ್ಯಾಸಕರ ಪ್ರೋತ್ಸಾಹದಿಂದ ಥಿಯೇಟರ್ನಲ್ಲಿ ಸಕ್ರಿಯವಾಗಿದ್ದರು. ಮುಂದೆ ಪದವಿ ಮುಗಿಸಿದ ನಂತರ ಗಂಗಾಧರಯ್ಯ ಐಟಿಐ ಕಂಪನಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೌಕರಿ ಹಿಡಿದರು. ಅಲ್ಲಿನ ಲಲಿತ ಕಲಾ ಸಂಘ ಅವರಲ್ಲಿನ ನಟನಾ ಕಲೆಗೆ ಮತ್ತಷ್ಟು ಹೊಳಪು ನೀಡಿತು. ರಂಗಕರ್ಮಿ ಆರ್.ನಾಗೇಶ್ ಮಾರ್ಗದರ್ಶನದಲ್ಲಿ ಅವರು ರಂಗಭೂಮಿಯಲ್ಲಿ ಸಕ್ರಿಯರಾದರು. ಸೂತ್ರಧಾರ, ರಂಗಸಂಪದ, ಬೆನಕ ರಂಗತಂಡಗಳ ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದರು. ಮುಂದೊಂದು ದಿನ ತಾವೇ “ಗ್ಲೋಬ್ ಥಿಯೇಟರ್’ ತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸಿದರು.
ಆಸ್ಫೋಟ, ಸೂರ್ಯಶಿಕಾರಿ, ಕಾಮಗಾರಿ, ಈಡಿಪಸ್, ಕದಡಿದ ನೀರು, ಚೋಮ… ಹೀಗೆ ಹತ್ತಾರು ನಾಟಕಗಳಲ್ಲಿನ ಸವಾಲಿನ ಪಾತ್ರಗಳ ನಿರ್ವಹಣೆಯಿಂದ ಉತ್ತಮ ಕಲಾವಿದ ಎಂದು ಕರೆಸಿಕೊಂಡಿದ್ದರು. ಇದರಿಂದಾಗಿ ಕಿರುತೆರೆ, ಸಿನಿಮಾದಲ್ಲಿ ಅವಕಾಶಗಳು ತಾನಾಗಿಯೇ ಅರಸಿ ಬಂದವು. 1981ರ ನಂತರ ದೂರದರ್ಶನಕ್ಕೆ ನಾಟಕಗಳನ್ನು ಮಾಡತೊಡಗಿದರು. ಸಿನಿಮಾ, ಕಿರುತೆರೆಯಲ್ಲಿ ಅವಕಾಶಗಳು ಹೆಚ್ಚಾದವು. ಈ ಮಧ್ಯೆ ಅವರು ಹುಲಿವಾನದಲ್ಲಿ ತೋಟ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿಯೂ ಓಡಾಡುತ್ತಿದ್ದರು. ಒತ್ತಡ ಹೆಚ್ಚಾದ್ದರಿಂದ 1997ರಲ್ಲಿ ಐಟಿಐ ಕಂಪನಿಯ ತಮ್ಮ ನೌಕರಿಗೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ನಟನೆ, ಕೃಷಿಯಲ್ಲಿ ತೊಡಗಿಸಿಕೊಂಡರು.
ಕಿರುತೆರೆಯಲ್ಲಿ ಸಂಕ್ರಾಂತಿ, ಮಹಾಯಜ್ಞ, ಮುಕ್ತ ಮುಕ್ತ, ಮಳೆಬಿಲ್ಲು ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ಅವರು ಉತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಿರುತೆರೆ ವೃತ್ತಿ ಬದುಕಿನ ಆರಂಭದ ದಿನಗಳಲ್ಲೇ ದೂರದರ್ಶನದಲ್ಲಿ ಮೂಡಿಬಂದ “ಅರ್ಧಸತ್ಯ’ ಸರಣಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ‘ಸೇಡಿನ ಹಕ್ಕಿ’ ಚಿತ್ರದೊಂದಿಗೆ ಹಿರಿತೆರೆ ಪ್ರವೇಶಿಸಿದ ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜ್ವಾಲಾಮುಖಿ, ಅದೇ ಕಣ್ಣು, ಕುಲಪುತ್ರ, ನವತಾರೆ, ಚೈತ್ರದ ಚಿಗುರು, ಸ್ವಸ್ತಿಕ್, ಭೂಮಿ ತಾಯಿಯ ಚೊಚ್ಚಲ ಮಗ, ಉಲ್ಟಾ ಪಲ್ಟಾ, ಎ, ಶಬ್ಧವೇಧಿ ಅವರ ಕೆಲವು ಪ್ರಮುಖ ಸಿನಿಮಾಗಳು.
ಹುಲಿವಾನ ಗಂಗಾಧರಯ್ಯ ಅವರು ಅಪ್ಪಟ ಕೃಷಿ ಜೀವಿ. ಸಾವಯವ ಕೃಷಿ ಪದ್ಧತಿಯನ್ನು ಅನುಮೋದಿಸುವ ಅವರು ಹುಲಿವಾನದ ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿದ್ದರು. ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ ಕೋಕನಟ್ ಪ್ರೊಡ್ಯೂಸರ್ಸ್ ಕಂಪನಿ ಸ್ಥಾಪಿಸಿ, ರೈತರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಕ್ಷೇತ್ರದ ತೆಂಗು ಬೆಳೆಗಾರರ ಬಗ್ಗೆ ಗಂಗಾಧರಯ್ಯ ವಿಶೇಷ ಆಸ್ಥೆಯಿಂದ ಕೆಲಸ ಮಾಡುತ್ತಿದ್ದರು. ನೀರಾ ಮಾರುಕಟ್ಟೆಗೆ ಬರಬೇಕೆನ್ನುವ ಹೋರಾಟದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯಿತ್ತು.
ತೆಂಗಿನ ಮರಗಳಿಗೆ ತೋಟದ ಸಂಪನ್ಮೂಲಗಳಿಂದಲೇ ಗೊಬ್ಬರ ಉತ್ಪಾದಿಸುವ ಅವರ ಯೋಜನೆಗೆ ಪುರಸ್ಕಾರವೂ ದೊರೆತಿದೆ. ಕಾಸರಗೋಡಿನ ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರೀಸರ್ಚ್ ಇನ್ಸ್ಟಿಟ್ಯೂಟ್ ಗಂಗಾಧರಯ್ಯನವರಿಗೆ “ಔಟ್ಸ್ಟ್ಯಾಂಡಿಂಗ್ ಅಂಡ್ ಇನ್ನೋವೇಟಿವ್ ಫಾರ್ಮರ್’ ಎಂದು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ಹುಟ್ಟೂರು ಹುಲಿವಾನದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
(ಹೆಚ್ಚಿನ ಮಾಹಿತಿಗೆ ಮಾಧ್ಯಮ ಮಿತ್ರರು 7676774776 ಸಂಪರ್ಕಿಸಿ)


Spread the love

Leave a Reply

Your email address will not be published. Required fields are marked *

You may have missed