ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ನಾಳೆ ಕಾಂಗ್ರೆಸ್ ಸೇರ್ಪಡೆ….
1 min readಹುಬ್ಬಳ್ಳಿ: ಹಲವು ದಿನಗಳಿಂದ ಜಾತ್ಯಾತೀತ ಜನತಾದಳದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕಾಂಗ್ರೆಸನೊಂದಿಗೆ ಸೇರಿಕೊಳ್ಳಲು ಹವಣಿಸುತ್ತಿದ್ದಾಗಲೇ, ನಾಳೆ ಅದಕ್ಕೊಂದು ತಾರ್ಕಿಕ ಅಂತ್ಯ ಸಿಗಲಿದೆ.
ನವಲಗುಂದ ಕ್ಷೇತ್ರದಲ್ಲಿ ಮೂರನೇಯ ಬಾರಿಗೆ ಗೆದ್ದು ಶಾಸಕರಾಗಿ ಕಳೆದ ಬಾರಿ ಸೋಲುಂಡಿದ್ದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ನಾಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಧ್ವಜವನ್ನ ಹಿಡಿಯಲಿದ್ದಾರೆಂದು ಖಚಿತ ಮೂಲಗಳಿಂದ ಗೊತ್ತಾಗಿದೆ.
ಕಳೆದ ವಿಧಾನಪರಿಷತ್ ಚುನಾವಣೆಯ ಸಮಯದಲ್ಲಿಯೇ ಕಾಂಗ್ರೆಸ್ ಶಾಲು ಹಾಕಿಕೊಂಡೇ ಪ್ರಚಾರ ಮಾಡಿದ್ದ ಎನ್.ಎಚ್.ಕೋನರೆಡ್ಡಿಯವರು ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆಂಬ ವದಂತಿ ನಾಳೆಗೆ ಸತ್ಯವಾಗಿ ಮಾರ್ಪಡಲಿದೆ.
ನವಲಗುಂದ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಸಚಿವರೂ ಆಗಿರುವ ಶಂಕರ ಪಾಟೀಲಮುನೇನಕೊಪ್ಪ ಅವರ ವಿರುದ್ಧ ಜೆಡಿಎಸ್ ಏನೂ ಮಾಡಲು ಆಗುವುದಿಲ್ಲವೆಂಬ ಸತ್ಯವನ್ನ ಅರಿತು ಕಾಂಗ್ರೆಸ್ ಜೊತೆಗೂಡಿ, ಮುಂದೆ ನಡೆಯುವ ಸಂಕಲ್ಪ ಮಾಡಿದ್ದಾರೆಂದು ಗೊತ್ತಾಗಿದೆ.
ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಸ್ವಂತ ಹಣವನ್ನ ಖರ್ಚು ಮಾಡಿಕೊಂಡು ಬೆಳೆಸಿಕೊಂಡು ಬಂದಿರುವ ವಿನೋದ ಅಸೂಟಿಯವರೇ ಮುಂದಿನ ವಿಧಾನಸಭಾ ಅಭ್ಯರ್ಥಿಯಾಗುತ್ತಾರೆಂಬ ನಂಬಿಕೆಯನ್ನ ಕಾರ್ಯಕರ್ತರು ಹೊಂದಿದ್ದಾರೆ. ಆದರೆ, ಕೋನರೆಡ್ಡಿಯವರು ಕಾಂಗ್ರೆಸ್ ಪಕ್ಷದಲ್ಲಿ ಏನಾಗುತ್ತಾರೆ ಎಂಬುದು ಇನ್ನೂ ಖಚಿತವಾಗಬೇಕಿದೆ.
ಉತ್ತರ ಕರ್ನಾಟಕದ ಕೇಂದ್ರ ಜಿಲ್ಲೆಯಲ್ಲಿದ್ದ ಜೆಡಿಎಸ್ ನ ಹೊರೆ ಹೊತ್ತ ಮಹಿಳೆ, ಕೈ ಹಿಡಿಯುತ್ತಿರುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ಹಿನ್ನೆಡೆಯಾಗಲಿದೆ.
ಅಣ್ಣಿಗೇರಿಯಲ್ಲಿ ನಡೆಯುವ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕೀಳಿಯುವುದಿಲ್ಲವೆಂದು ಹೇಳಲಾಗುತ್ತಿದ್ದು, ವಿನೋದ ಅಸೂಟಿಯವರು ಸೂಚಿಸಿದ ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆ.
ನಾಳೆ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗುತ್ತಿರುವ ಸಮಯದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಕೋನರೆಡ್ಡಿ ಪಕ್ಷವನ್ನ ಸೇರ್ಪಡೆಯಾಗಲಿದ್ದಾರೆ.