ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ ಬಿಜೆಪಿಗೆ: ರಮೇಶ ಜಾರಕಿಹೊಳಿ
1 min readಬೆಳಗಾವಿ: ಖಾನಾಪುರದಲ್ಲಿ ಎಂಇಎಸ್ ನಿಂದ ಚುನಾಯಿತರಾಗಿದ್ದ ಮಾಜಿ ಶಾಸಕ ಅರವಿಂದ ಪಾಟೀಲ ಈಗ ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲಿಲ್ಲ. ಅವರನ್ನು ಶೀಘ್ರವೇ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ 65ನೇ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ನಂತರ ಸಚಿವರು ಮಾತನಾಡಿದರು. ಅರವಿಂದ ಪಾಟೀಲ ಈಗ ಸಮಿತಿ (ಎಂಇಎಸ್) ಯಲ್ಲಿಲ್ಲ. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಬಿಜೆಪಿಗೆ ಸೇರುತ್ತಾರೆ ಎನ್ನುವ ಕಾರಣಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೆಂಬಲಿಸಿದ್ದೀರಾ ಎನ್ನುವ ಪ್ರಶ್ನೆಗೆ, ಅದು ಸಹಕಾರಿ ಸಂಸ್ಥೆ. ಅಲ್ಲಿ ರಾಜಕೀಯವಿಲ್ಲ ಎಂದರು. ಮಹಾರಾಷ್ಟ್ರ ಸರಕಾರ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಘೋಷಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅವರದ್ದು ಅವರು ಮಾಡಿಕೊಳ್ಳಲಿ. ನಮ್ಮದು ನಾವು ಮಾಡುತ್ತೇವೆ. ಕನ್ನಡ ನಾಡಿನ, ಕನ್ನಡಿಗರ ಹಿತ ಬಲಿಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಾರಕಿಹೊಳಿ ಕನ್ನಡ ನಾಡು-ನುಡಿ; ನೆಲ-ಜಲ ಸಂರಕ್ಷಣೆಗೆ ಸರಕಾರ ಸದಾ ಬದ್ಧವಾಗಿರುತ್ತದೆ ಎಂದರು. ಇದೇ ವೇಳೆ ಜಿಲ್ಲಾಡಳಿತದ ವತಿಯಿಂದ 19 ಜನರಿಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.