Exclusive- ಬೆಣ್ಣೆಹಳ್ಳದಲ್ಲಿ ಸಿಲುಕಿದ್ದ ರೈತರ ರಕ್ಷಣೆ: ಹ್ಯಾಟ್ಸಾಫ್ ಪೊಲೀಸ್: ಕಾರ್ಯಾಚರಣೆಯ ಕಂಪ್ಲೀಟ್ ಮಾಹಿತಿ

ಧಾರವಾಡ: ಸುತ್ತಲೂ ನೂರಾರೂ ಮೀಟರಗಳಷ್ಟು ಬೋರ್ಗರೆಯುವ ನೀರು. ಯಾವ ಕಡೆ ಹೊರಳಿದರೂ ಕತ್ತಲು.. ಕತ್ತಲು.. ಭಯಬಿದ್ದು ಯಾರನ್ನಾದರೂ ಕರೆಯಬೇಕೆಂದರೇ, ಯಾರಿಗೂ ಧ್ವನಿಯೂ ಕೇಳಿಸದು. ನೀರಿನ ಶಬ್ದದಿಂದಲೇ ಅರ್ಧ ಜೀವ ಹೋದಂತಾಗಿದ್ದ ಮೂವರನ್ನ ತಮ್ಮ ಪ್ರಾಣದ ಹಂಗನ್ನು ತೊರೆದು ರಕ್ಷಣೆಯನ್ನ ಮಾಡಲಾಗಿದೆ.
ರಕ್ಷಣಾ ಕಾರ್ಯ ಹೇಗೆ ನಡೆಯಿತು ಗೊತ್ತಾ.. ಎಕ್ಸ್ಕಲೂಸಿವ್ ದೃಶ್ಯಾವಳಿಗಳು
ಚೆನ್ನಮ್ಮನ ಕಿತ್ತೂರು ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದರಿಂದ ಮೂವರು ನವಲಗುಂದ ತಾಲೂಕಿನ ಗುಡಿಸಾಗರದ ಬೆಣ್ಣೆಹಳ್ಳದಲ್ಲಿ ಸಿಲುಕಿಕೊಂಡಿದ್ದರು. ಹೊಲದಲ್ಲಿ ಕೆಲಸ ಮಾಡಲು ತಮ್ಮ ಎರಡು ಆಡುಗಳನ್ನ ತೆಗೆದುಕೊಂಡೇ ಹೋಗಿದ್ದರು. ನಮ್ಮ ಭಾಗದಲ್ಲಿ ಮಳೆ ಆಗುತ್ತಿಲ್ಲವೆಂದು ಸಂಜೆ ಏರುಹೊತ್ತಿನವರೆಗೆ ಕೆಲಸ ಮಾಡಿ ಇನ್ನೇನು ಮನೆ ಕಡೆ ಬರಬೇಕು, ಅಷ್ಟರಲ್ಲಿ ಬೆಣ್ಣೆಹಳ್ಳ ತನ್ನ ಹಳೇಯ ಚಾಳಿಯನ್ನ ತೋರಿಸಿಬಿಟ್ಟಿತ್ತು. ಗುಡಿಸಾಗರದ ಶರಣಪ್ಪ ಮೇಟಿ, ಗಂಗಮ್ಮ ಮತ್ತು ಬೀರಪ್ಪ ಹಳ್ಳದಲ್ಲಿ ಸಿಲುಕಿಕೊಂಡು ಬಿಟ್ಟರು.
ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪರಿಗೆ ವಿಷಯ ಗೊತ್ತಾಗಿದ್ದೇ ತಡ ತಾಲೂಕಾಡಳಿತಕ್ಕೆ ಬೇಕಾದ ಸೌಲಭ್ಯ ಪಡೆದು ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ರು. ತಕ್ಷಣವೇ ವೃತ್ತ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿಎಸೈ ಜಯಪಾಲ ಸ್ಥಳಕ್ಕೆ ದೌಡಾಯಿಸಿ, ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡರು. ರಾತ್ರೋರಾತ್ರಿ ತಹಶೀಲ್ದಾರ ನವೀನ ಹುಲ್ಲೂರ ಕೂಡಾ ಸ್ಥಳಕ್ಕೆ ಆಗಮಿಸಿದರು.
ಕತ್ತಲು ಆವರಿಸಿದ್ದರಿಂದ ಕಾರ್ಯಾಚರಣೆ ಮಾಡಲು ತೊಂದರೆಯಾಗಬಹುದೆಂಬ ಭಯವಿತ್ತಾದರೂ ಪೊಲೀಸರು, ಅಗ್ನಿಶಾಮಕ ದಳದವರು ಅದನ್ನೇಲ್ಲ ನಿಭಾಯಿಸಿ, ರಾತ್ರಿ ಒಂದು ಗಂಟೆಯ ಹೊತ್ತಿಗೆ ಮೂವರನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತು. ರೈತರು ತೆಗೆದುಕೊಂಡು ಹೋಗಿದ್ದ ಆಡುಗಳನ್ನೂ ಹೊರಗೆ ತಂದ ರೈತರ ಖುಷಿಯನ್ನ ಇಮ್ಮಡಿಗೊಳಿಸಿದರು.
ನವಲಗುಂದ ಠಾಣೆಯ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಜನರ ರಕ್ಷಣೆಯ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು, ಕಳೆದ ಬಾರಿ ಪಿಎಸೈ ಜಯಪಾಲ ಪಾಟೀಲ ಕೂಡಾ, ರೈತರನ್ನ ರಕ್ಷಣೆ ಮಾಡಲು ಹೋಗಿ ತಾವೂ ಸಿಕ್ಕಿಕೊಂಡಿದ್ದರು. ಆದರೂ, ಈ ಬಾರಿಯೂ ಅವರೇ ಮುಂಚೂಣಿಯಲ್ಲಿದ್ದು ರೈತರ ರಕ್ಷಣೆ ಮಾಡಿದ್ದು ಶ್ಲಾಘನೀಯ.