ಹುಬ್ಬಳ್ಳಿಯ ಬಾಲಕಿ ಹತ್ಯೆ ಪ್ರಕರಣ: ಎನ್‌ಕೌಂಟರ್‌ಗೆ ಆರೋಪಿ ಬಲಿ…

ಹುಬ್ಬಳ್ಳಿ: ಸಂತೋಷನಗರದಲ್ಲಿ ಐದು ವರ್ಷದ ಬಾಲಕಿಯನ್ನ ಅಪಹರಣ ಮಾಡಿ ಹತ್ಯೆ ಮಾಡಿದ್ದ ಆರೋಪಿಗೆ ಪೊಲೀಸರು ಕಾಲಿಗೆ ಗುಂಡು ಹಾಕಿದ್ದು, ಈ ಸಮಯದಲ್ಲಿ ತೀವ್ರವಾದ ರಕ್ತಸ್ರಾವವಾಗಿ ಆರೋಪಿ ಬಲಿಯಾದ ಘಟನೆ ಈಗಷ್ಟೇ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆಗೆ ಕಾರಣವಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಂಪತಿಗಳು ಹುಬ್ಬಳ್ಳಿಯಲ್ಲಿ ವಾಸ ಮಾಡುತ್ತಿದ್ದರು. ತಂದೆ ಪೇಟಿಂಗ್ ಕೆಲಸ ಮಾಡುತ್ತಿದ್ದರೇ, ತಾಯಿ ಅವರಿವರ ಮನೆಯ ಕೆಲಸ ಮಾಡಿ, ಮಧ್ಯಾಹ್ನದ ನಂತರ ಬ್ಯೂಟಿ ಪಾರ್ಲರ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.
ಎಂದಿನಂತೆ ಹೊರಗೆ ಹೋಗಿ ಮನೆಗೆ ಬಂದಾಗ ಐದು ವರ್ಷದ ಮಗಳು ಕಂಡಿಲ್ಲ. ಆಗ, ತಾಯಿಯು ತನ್ನ ಪತಿಗೆ ಕರೆದು ಹುಡುಕಾಟ ಆರಂಭಿಸಿದ್ದಾರೆ. ನಂತರ ಮಗು ಮನೆಯ ಕೂಗಳತೆ ದೂರದಲ್ಲಿನ ಟಾಯ್ಲೆಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ನೂರಾರು ಜನರು ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲ, ಆರೋಪಿಯನ್ನ ನಮ್ಮ ಕೈಗೆ ಕೊಡಿ ಎಂದು ಆಕ್ರೋಶ ಹೊರ ಹಾಕಿದ್ದರು.
ನತದೃಷ್ಟ ತಂದೆ-ತಾಯಿ ಕಿಮ್ಸ್ ಮುಂಭಾಗದಲ್ಲಿ ನಿಂತು ನಮ್ಮ ಮಗಳನ್ನ ಕೊಡಿ ಎಂದು ಕಣ್ಣೀರು ಹಾಕುತ್ತಿದ್ದರು. ಈ ನಡುವೆ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಒತ್ತಾಯ ಕೇಳಿ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿ ಸಾವಿಗೀಡಾಗಿದ್ದಾನೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರ ಈ ಕಾರ್ಯ ಜನಮೆಚ್ವುಗೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಹತ್ಯೆಗೀಡಾಗಿದ್ದ ಮಗಳ ಆತ್ಮಕ್ಕೆ ಶಾಂತಿ ದೊರಕಿದೆ ಎಂದು ಪಾಲಕರು ಹೇಳುವಂತಾಗಿದೆ.