ಶಾಲೆ ಆರಂಭಿಸಬೇಕು- ನೀವೂ ಸಲಹೆ ನೀಡಿ-ಮಂತ್ರಿ, ಶಾಸಕರಿಗೆ ಸಚಿವ ಸುರೇಶಕುಮಾರ ಪತ್ರ
ಬೆಂಗಳೂರು: ಈ ಹಿಂದೆ ಕಂಡು ಕೇಳರಿಯದ ಸಮಸ್ಯೆಗಳನ್ನು ಕೊರೋನಾ ವೈರಸ್ ತಂದಿಟ್ಟಿದೆ. ಕಳೆದ ಮಾರ್ಚ್ ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತಡೆ ಹಾಕಿದೆ. ಆತಂಕದ ಮಧ್ಯೆ ಶಿಕ್ಷಣ ಇಲಾಖೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿದೆ. ಆದರೆ ಜೂನ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಶೈಕ್ಷಣಿಕ ಚಟುವಟಿಕೆಗಳು ಮಾತ್ರ ಇನ್ನೂ ಆರಂಭವಾಗಿಲ್ಲ. ಕಳೆದ ಮಾರ್ಚ್ ನಲ್ಲಿ ಮುಚ್ಚಲಾಗಿರುವ ಶಾಲೆಗಳನ್ನು ಇನ್ನೂ ತೆರೆದಿಲ್ಲ. ಹೀಗಾಗಿ ಈ ವರ್ಷದ ಶೈಕ್ಷಣಿಕ ವರ್ಷ ಅತಂತ್ರವಾಗಿದೆ. ಮಂದೇನೂ ಎಂಬಂತಹ ಪರಿಸ್ಥಿತಿಯಲ್ಲಿ ಶಾಲೆ ಆರಂಭಿಸುವ ಕುರಿತು ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಅವರು ಪತ್ರ ಬರೆದಿದ್ದಾರೆ.
ರಾಜ್ಯದ ಎಲ್ಲ ಮಂತ್ರಿ ಹಾಗೂ ಶಾಸಕರಿಗೆ ಸುರೇಶ್ ಕುಮಾರ್ ಪತ್ರದಲ್ಲಿ ಮಹತ್ವದ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಶಾಲೆಗಳನ್ನು ಆರಂಭಿಸುವ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದಾರೆ. ಹಾಗಾದರೆ ಶಿಕ್ಷಣ ಇಲಾಖೆಯ ಚಿಂತನೆ ಏನು? ಮುಂದೆ ಓದಿ.
ಕೊರೋನಾ ಸಾಂಕ್ರಾಮಿಕ ರೋಗದ ಪ್ರಸರಣ ದಿನದಿಂದ ದಿನಕ್ಕೆಫಪ ತೀವ್ರವಾಗುತ್ತಲೇ ಸಾಗಿದೆ. ಈ ಪರಿಸ್ಥಿತಿಯ ನಡುವೆಯೇ ಸಾಮಾಜಿಕ ಜೀವನ ತಹಬಂದಿಗೆ ಮರಳಬೇಕಿದೆ. ಕೊರೋನಾ ಕಾರಣಕ್ಕಾಗಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವುದು ಶಿಕ್ಷಣ ಕ್ಷೇತ್ರವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು ಶಾಸಕರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಕೊರೋನಾ ತೀವ್ರ ಪ್ರಸರಣದ ಹಿನ್ನೆಲೆಯಲ್ಲಿ ಕಳೆದ ಮಾರ್ಚನಲ್ಲಿಯೇ ಮುಚ್ಚಿದ ಶಾಲೆಗಳನ್ನು ಇನ್ನೂ ತೆರೆಯಲಾಗುತ್ತಿಲ್ಲ. ಹಾಗೆಯೇ ಇದು ಹಲವಾರು ಸಾಮಾಜಿಕ ಪಿಡುಗುಗಳಿಗೂ ಕಾರಣವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಶಾಲಾರಂಭ ಮತ್ತು ಸಮುದಾಯದ ಸಹಕಾರ ಕುರಿತಂತೆ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕೋರಿದ್ದಾರೆ.
ಕೊರೋನಾ ಕಾಲದಲ್ಲಿ ತೀವ್ರ ಸಂಕಷ್ಟಕ್ಕೆ ಈಡಾಗಿರು ಶಿಕ್ಷಣ ಇಲಾಖೆಯನ್ನು ಅದರಿಂದ ಹೊರಗೆ ತರಬೇಕಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಎಲ್ಕೆಜಿಯಿಂದ ಎಸ್ ಎಸ್ ಎಲ್ ಸಿ ವರೆಗೆ ಯಾವಾಗ ಪ್ರಾರಂಭಿಸಬೇಕು ಎಂದು ಸುರೇಶ್ ಕುಮಾರ್ ಅವರು ಶಾಸಕರ ಅಭಿಪ್ರಾಯ ಕೇಳಿದ್ದಾರೆ.
ಅದರೊಂದಿಗೆ ಒಂದೊಮ್ಮೆ ಶಾಲೆ ಪ್ರಾರಂಭಿಸಿಸುವ ತೀರ್ಮಾನ ಮಾಡಿದಲ್ಲಿ ಯಾವ ತರಗತಿಯನ್ನು ಮೊದಲು ಆರಂಭಿಸಬೇಕು ಎಂದು ಕೇಳಿದ್ದಾರೆ.
ಕೊರೋನಾ ವೈರಸ್ ಆತಂಕದ ಮಧ್ಯೆ ಶಾಲೆಗಳನ್ನು ಆರಂಭಿಸಿದರೆ ಅದಕ್ಕೆ ಇಡೀ ಸಮಾಜ ಹೇಗೆ ಸ್ಪಂದನೆ ಕೊಡಬಹುದು? ಹಾಗೂ ಜನಪ್ರತಿನಿಧಿಗಳಿಂದ ಯಾವ ರೀತಿ ಸಹಕಾರವನ್ನು ನಾವು ನಿರೀಕ್ಷೆ ಮಾಡಬಹುದು ಎಂಬುದನ್ನು ತಿಳಿಸುವಂತೆ ಸುರೇಶ್ ಕುಮಾರ್ ಕೇಳಿದ್ದಾರೆ.
ಕೊರೋನಾ ಸಂಕಷ್ಟದಿಂದಾಗಿ ಖಾಸಗಿ ಶಾಲೆಗಳು ಆನ್ ಲೈನ್ ತರಗತಿಗಳನ್ನು ನಡೆಸುತ್ತಿವೆ. ಹಾಗೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ ಆನುಷ್ಠಾನಗೊಳಿಸಲಾಗಿದೆ. ಜೊತೆಗೆ ದೂರದರ್ಶನ, ಯೂಟ್ಯೂಬ್ ಚಾನಲ್ ಗಳ ಮೂಲಕವೂ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಇವ್ಯಾವು ಕೂಡ ಈಗ ಆಗುತ್ತಿಲ್ಲ. ನಾಲ್ಕು ಗೋಡೆಗಳ ಮಧ್ಯ ಸಹಪಾಠಿಗಳೊಂದಿಗೆ ಕಲಿತು ಕಲಿಯುವ, ಬಯಲಿನಲ್ಲಿ ಆಟವಾಡಿ ಮನೆಗೆ ಹೋಗುವ ಮೂಲಕ ಸಮಗ್ರ ಶಿಕ್ಷಣ ಮಕ್ಕಳಿಗೆ ಪ್ರಮುಖವಾಗುತ್ತದೆ. ಜೊತೆಗೆ ಶಾಲೆಗಳು ಮುಚ್ಚಿರುವುದರಿಂದ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪಿಡುಗು ಹೆಚ್ಚಾಗುತ್ತಿದೆ ಎಂಬ ಮಾಹಿತಿಯಿದೆ ಎಂದು ಸುರೇಶ ಕುಮಾರ್ ಪತ್ರದಲ್ಲಿ ಬರೆದಿದ್ದಾರೆ.