ಧಾರವಾಡ: ಶಿಕ್ಷಣ ಇಲಾಖೆಯಲ್ಲಿನ “ಹೆಗ್ಗಣ”ಗಳ ತೆರವಿಗೆ ಸಿಎಂ ಮುದ್ರೆ ಬಾಕಿ- ಮುಂದುವರೆದ “ಶಾ Money” ಪ್ರಯತ್ನ…!!!

ಧಾರವಾಡ: ಒಂದೇ ಕಚೇರಿಯಲ್ಲಿ ಏಳು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಇಲಾಖೆಯ ನೌಕರರ ವರ್ಗಾವಣೆಯ ಕುರಿತು ಸಭಾಪತಿ ಬಸವರಾಜ ಹೊರಟ್ಟಿಯವರು ಗಂಭೀರವಾಗಿ ಗಮನ ಸೆಳೆದ ಹಿನ್ನಲೆಯಲ್ಲಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಧಾರವಾಡ ಅಪರ ಆಯುಕ್ತರಿಗೆ ಸೂಚನೆ ನೀಡಿ, ಏಳು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಚೇರಿಯಲ್ಲಿ ಕಾರ್ಯ ಸಲ್ಲಿಸುತ್ತಿರುವ ನೌಕರರ ಪಟ್ಟಿ ತಯಾರಿಸಿ, ವರ್ಗಾವಣೆಗೊಳಿಸಲು ಮುಖ್ಯಮಂತ್ರಿಯವರಿಗೆ ಶಿಫಾರಸ್ಸು ಮಾಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ, ಕಳೆದ ವಾರ ಧಾರವಾಡ ಶಿಕ್ಷಣ ಇಲಾಖೆಯಲ್ಲಿ ಏಳು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪಟ್ಟಿಯನ್ನು, ಶಿಕ್ಷಣ ಸಚಿವರ ಮೂಲಕ ವರ್ಗಾವಣೆಗಾಗಿ ಮುಖ್ಯಮಂತ್ರಿ ಯವರ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಧಾರವಾಡದ ಶಿಕ್ಷಣ ಇಲಾಖೆಯ ನೌಕರರ ಪಟ್ಟಿಯನ್ನು ಮುಖ್ಯಮಂತ್ರಿಯವರ ಅನುಮೋದನೆಗೆ ಸಲ್ಲಿಸುವ ಮುನ್ನ, ಧಾರವಾಡ ಶಿಕ್ಷಣ ಇಲಾಖೆ ನೌಕರರಾದ ಶಾ-money ಯವರನ್ನು ಬೆಂಗಳೂರಿಗೆ ಕರೆಯಿಸಿಕೊಂಡ ಕೆಲ ಸಚಿವಾಲಯದ ಸಿಬ್ಬಂದಿಯರು ಅವರ ಹೆಸರನ್ನು ವರ್ಗಾವಣೆ ಪಟ್ಟಿಯಿಂದ ಕೈಬಿಡುವುದಾಗಿ ಆಶ್ವಾಸನೆ ನೀಡಿ ಅವರಿಂದ ಸಾಕಷ್ಟು ಕಪ್ಪು ಕಾಣಿಕೆ ಎತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ, ಶಿಕ್ಷಣ ಇಲಾಖೆಯಲ್ಲಿ ಏಳು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎಲ್ಲ ನೌಕರರನ್ನು ಬೇರೊಂದು ಜಿಲ್ಲೆಗೆ ವರ್ಗಾಯಿಸಲಿದ್ದಾರೊ ಅಥವಾ (ಶಾ-money) ಕಪ್ಪ ನೀಡಿದವರನ್ನು ವರ್ಗಾವಣೆಯಿಂದ ಕೈಬಿಡುವರೊ ಎಂಬುದನ್ನು ಕಾದು ನೋಡಬೇಕಾಗಿದೆ.
ಏನಾದರಾಗಲಿ ಇದೊಂದು ವರ್ಷವಾದರೂ ಇಲ್ಲಿಯೇ ತಳ ಊರಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಕೆಲ ನೌಕರರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಮಂತ್ರಿ ಅಧಿಕಾರಿಗಳ ಬೆನ್ನುಹತ್ತಿ ತಿರುಗುವಾಗ ಯಾರಾದರು ಹುಬ್ಬಳ್ಳಿ ಧಾರವಾಡದವರು ಅವರ ಕಣ್ಣಿಗೆ ಬಿದ್ದರೆ ಮುಖ ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.