ಧಾರವಾಡ ಶಿಕ್ಷಣ ಇಲಾಖೆಯಲ್ಲಿ “ಬಿಡಾರ” ಹೂಡಿರುವ ಸಿಬ್ಬಂದಿಗಳು: ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಬೇಸರ…!!!

ಹುಬ್ಬಳ್ಳಿ: ಶಾಲಾ ಶಿಕ್ಷಣ ಇಲಾಖೆಯ ಒಂದೇ ಕಚೇರಿಯಲ್ಲಿ 7 ವರ್ಷಕ್ಕಿಂತಲೂ ಹೆಚ್ಚು ಅವಧಿಗೆ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಯಿಂದ ಭ್ರಷ್ಟಾಚಾರ ಹಾಗೂ ಸಾರ್ವಜನಿಕರೊಂದಿಗೆ ದುರಹಂಕಾರದ ವರ್ತನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಬೇರೆ ಜಿಲ್ಲೆ ಅಥವಾ ಬೇರೆ ಕಚೇರಿಗೆ ಕಡ್ಡಾಯವಾಗಿ ವರ್ಗಾಯಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತಾಗಿ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಧಾರವಾಡದ ಅಪರ ಆಯುಕ್ತರಿಗೆ ಪತ್ರ ಬರೆದು ಧಾರವಾಡ ಉಪನಿರ್ದೇಶಕರ ಕಚೇರಿ ಹಾಗೂ ಅಪರ ಆಯುಕ್ತಾಲಯದಲ್ಲಿ ಕಳೆದ 10 ರಿಂದ 15 ವರ್ಷಗಳ ಕಾಲ ಅಲ್ಲೇ ಕೆಲಸ ಮಾಡುತ್ತಿರುವ ಕೆಲ ನೌಕರರ ಗ್ಯಾಂಗ್ ಗಳಿಂದ ಸಾರ್ವಜನಿಕರು, ಶಿಕ್ಷಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನಲೆ ಸಭಾಪತಿಯವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಜಿ ಶಿಕ್ಷಣ ಸಚಿವರು ಹಾಗೂ ಹಾಲಿ ಸಭಾಪತಿಯವರೇ ಶಿಕ್ಷಣ ಇಲಾಖೆ ಬಗ್ಗೆ ಇಷ್ಟೊಂದು ಮನನೊಂದಿರುವಾಗ ಇನ್ನು ಜನ ಸಾಮಾನ್ಯರ ಮತ್ತು ಶಿಕ್ಷಕರ ಪಾಡು ಹೇಳತೀರದು ಎಂದು ಪ್ರಜ್ಞಾವಂತ ನಾಗರಿಕರು ಮರುಗುತ್ತಿದ್ದಾರೆ.
ಆಯಕಟ್ಟಿನ ಒಂದೇ ಸ್ಥಳದಲ್ಲಿ ಹಲವಾರು ವರ್ಷಗಳಿಂದ ಬೇರು ಬಿಟ್ಟಿರುವ ಹಕನಾಕ್ ಭ್ರಷ್ಟ ಸಿಬ್ಬಂದಿ ವರ್ಗಾವಣೆ ಸಮಯದಲ್ಲಿ ಎಲ್ಲಿಲ್ಲದ ಉತ್ಸಾಹದಿಂದ ಕೆಲಸ ಮಾಡಲು ಆರಂಭಿಸುತ್ತಾರೆ. ಯಾರ್ಯಾರಿಗೆ ಏನೇನು ಮುಟ್ಟಿಸಬೇಕೋ ಅದನ್ನೆಲ್ಲ ಅತ್ಯಂತ ಪ್ರಾಮಾಣಿಕವಾಗಿ ಮುಟ್ಟಿಸಿ, ಮತ್ತೆ ಮುಂದಿನ ಒಂದು ವರ್ಷದ ತನಕ ತಾವು ಸಧ್ಯ ಕೆಲಸ ಮಾಡುವ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಅದಾದ ಮರುದಿನವೇ ಮತ್ತೆ ತಮ್ಮ ಕೈ ಚೆಳಕ ತೋರಿಸಲು ಆರಂಭಿಸುತ್ತಾರೆ ಎಂದು ಶಿಕ್ಷಣ ಪ್ರೇಮಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಒಂದೇ ಕಡೆ ಉಳಿದುಕೊಳ್ಳಲು ಏನೆಲ್ಲ ವಾಮಮಾರ್ಗಗಳನ್ನು ಬಳಸುವ, ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರೂರಿರುವ ಇಂತಹ ನೌಕರರನ್ನು ತಕ್ಷಣ ಎತ್ತಂಗಡಿ ಮಾಡಬೇಕೆಂದು ಧಾರವಾಡದ ಸಾಮಾಜಿಕ ಹೋರಾಟಗಾರರು ಶಿಕ್ಷಣ ಪ್ರೇಮಿಗಳು ಆಗ್ರಹಿಸುತ್ತಿದ್ದಾರೆ.
ಇಲ್ಲದಿದ್ದರೆ, ಈಗಾಗಲೇ ಗೆದ್ದಲು ಹತ್ತಿ ಶಿಥಿಲಗೊಂಡ ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹೊಲಸು ರಾಜಕೀಯದಿಂದ ಮತ್ತಷ್ಟು ಗಬ್ಬೆದ್ದು ಹೋಗುವ ಸಾಧ್ಯತೆ ಇದೆ. ಯುವ ನಾಯಕರೂ, ಸೂಕ್ಷ್ಮ ಮತಿಗಳೂ ಆದ ಪ್ರಾಥಮಿಕ ಶಿಕ್ಷಣ ಇಲಾಖೆಯ ಮಂತ್ರಿಗಳು ಇತ್ತ ಗಮನ ಹರಿಸಲಿ ಎನ್ನುವುದೇ ಎಲ್ಲರ ಆಶಯವಾಗಿದೆ.