ಧಾರವಾಡ: ಮಗಳು-ಹೆಂಡತಿಗೆ ವಿಷಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ಮಾರ್ಕಪೋಲೊ ಉದ್ಯೋಗಿ
ಧಾರವಾಡ: ತನ್ನ ನೌಕರಿಗೆ ಕುತ್ತು ಬರಬಹುದೆಂಬ ಸಂಶಯದಿಂದ ತನ್ನ ಎರಡು ವರ್ಷದ ಮಗು ಹಾಗೂ ಹೆಂಡತಿಗೆ ವಿಷಕೊಟ್ಟ ಮಾರ್ಕಪೋಲೋ ಉದ್ಯೋಗಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೆಹಬೂಬನಗರದ ಕವಳಿಕಾಯಿ ಚಾಳನಲ್ಲಿ ಸಂಭವಿಸಿದೆ.
ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದ ಮೌನೇಶ ಪತ್ತಾರ ಮಾರ್ಕಪೋಲೊದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಮನೆಯಲ್ಲಿದ್ದ ಮಡದಿ ಅರ್ಪಿತಾ ಹಾಗೂ ಎರಡು ವರ್ಷದ ಶುಕೃತಾಳಿಗೆ ಮಲಗುವ ಸಮಯದಲ್ಲಿ ವಿಷಕೊಟ್ಟು ಅವರ ಸಾವಾದ ನಂತರ ತಾನೂ ನೇಣಿಗೆ ಶರಣಾಗಿದ್ದಾನೆ.
ಕುಟುಂಬದ ಆತ್ಮಹತ್ಯೆಗೆ ನಿಖರವಾದ ಮಾಹಿತಿ ಸಿಕ್ಕಿಲ್ಲವಾದರೂ, ನಿನ್ನೆಯಷ್ಟೇ ಮಾರ್ಕಪೋಲೊ ಕಂಪನಿಯಲ್ಲಿ 34 ಜನರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಕೆಲಸದಲ್ಲಿ ಹೆಚ್ಚು ಒತ್ತಡವಿಲ್ಲದಿದ್ದರೂ ಸಂಬಳ ಕಡಿತ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇವೇ ಕಾರಣಗಳು ಆತ್ಮಹತ್ಯೆಗೆ ಮೂಲವಾಯಿತಾ ಎಂಬ ಸಂಶಯ ಕಾಡುತ್ತಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಉಪನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.