Posts Slider

Karnataka Voice

Latest Kannada News

ಪ್ರಾಮಾಣಿಕತೆ ಮೆರೆದ ಬಸ್ ಚಾಲಕ-ನಿರ್ವಾಹಕ: ಅಧಿಕಾರಿಗಳಿಂದ ಗೌರವ

Spread the love

ಹುಬ್ಬಳ್ಳಿ: ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 15820 ರೂಪಾಯಿ ನಗದು ಹಣ ಮತ್ತು ಬೆಲೆಬಾಳುವ ದಾಖಲಾತಿಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಂಸ್ಥೆಯ ಬಸ್ ನಿರ್ವಾಹಕ ಗುರುಸಿದ್ದಯ್ಯ ಜಿ. ಗೌಡರ್ ಮತ್ತು ಚಾಲಕ ಬಸವರಾಜ ಎನ್. ಬಾದಾಮಿಯವರನ್ನು ವಾಕರಸಾಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ಕಚೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮತ್ತು ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ್ ಗೌರವಿಸಿ ಅಭಿನಂದಿಸಿದರು.

ವಾಕರಸಾಸಂಸ್ಥೆಯ ಬಾಗಲಕೋಟೆ ವಿಭಾಗದ ಗುಳೇದಗುಡ್ಡ ಘಟಕಕ್ಕೆ ಸೇರಿದ ಕೆ.ಎ.29 ಎಫ್ 1251 ಸಂಖ್ಯೆಯ ಬಸ್ಸು ಜುಲೈ 2ರಂದು ಗುಳೇದಗುಡ್ಡದಿಂದ ಹುಬ್ಬಳ್ಳಿಗೆ ಬರುವಾಗ ಸದರಿ ಬಸ್ಸಿನಲ್ಲಿ ನವಲಗುಂದದಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ ಪ್ರಯಾಣಿಕರೊಬ್ಬರು ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ತಮ್ಮ ಪರ್ಸನ್ನು ಬಸ್ಸಿನಲ್ಲಿಯೇ ಬಿಟ್ಟು ಹೋಗಿದ್ದರು. ನಂತರ ಹುಬ್ಬಳ್ಳಿಯಿಂದ ಗುಡ್ಡಕ್ಕೆ  ಹೊರಡುವುದಕ್ಕಾಗಿ ಬಸ್ಸನ್ನು ಬಸ್ ನಿಲ್ದಾಣದಲ್ಲಿ ಅಂಕಣಕ್ಕೆ ನಿಲ್ಲಿಸುವಾಗ ನಿರ್ವಾಹಕರು ಪ್ರಯಾಣಿಕರ ಆಸನದಲ್ಲಿ ಪರ್ಸ್ ಇರುವುದನ್ನು ಗಮನಿಸಿದ್ದರು.

ಪರ್ಸ್ ನ್ನು ಪರಿಶೀಲಿಸಲಾಗಿ ಅದರಲ್ಲಿ 15820 ರೂ. ನಗದು ಹಣದ ಜೊತೆಗೆ  ಮೂರು ಎಟಿಎಂ ಕಾರ್ಡ್ ಗಳು, ಪ್ಯಾನ್ ಕಾರ್ಡ್, ಚಾಲನಾ ಪರವಾನಿಗೆ, ದ್ವಿಚಕ್ರ ವಾಹನದ ಆರ್. ಸಿ. ಪುಸ್ತಕ ಮತ್ತಿತರ ಮುಖ್ಯ ದಾಖಲೆಗಳು ಇರುವುದು ಕಂಡುಬಂದಿರುತ್ತದೆ.ಅದರಲ್ಲಿ ಪ್ರಯಾಣಿಕರ ಹೆಸರು,ವಿಳಾಸ, ದೂರವಾಣಿ ಸಂಖ್ಯೆ ಲಭ್ಯವಿಲ್ಲದ್ದರಿಂದ ಪರ್ಸ್ ನಲ್ಲಿದ್ದ ಎಟಿಎಂ ಕಾರ್ಡ್ ಮೂಲಕ ಹುನಗುಂದದ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ. ಪ್ರಯಾಣಿಕರನ್ನು ತುಮಕೂರು ಮೂಲದ ಹಾಲಿ ಹುಬ್ಬಳ್ಳಿ ನಿವಾಸಿ ಬಿ.ಎನ್. ನಟರಾಜು ಎಂಬುದಾಗಿ ಪತ್ತೆ ಮಾಡಿ ಅವರಿಗೆ ಪರ್ಸ್ ಸಿಕ್ಕಿರುವ ವಿಚಾರವನ್ನು ತಿಳಿಸಿದ್ದರು. ಕಳೆದುಕೊಂಡ ಪ್ರಯಾಣಿಕರನ್ನು ಇಂದು ವಿಭಾಗ ಕಚೇರಿಗೆ ಕರೆಸಿ ನಿರ್ವಾಹಕರ ಮೂಲಕ ಅವರ ಪರ್ಸನ್ನು ಹಿಂದಿರುಗಿಸಲಾಗಿಯಿತು.

ಪ್ರಾಮಾಣಿಕತೆ ಮೆರೆದು ಇತರರಿಗೆ ಮಾದರಿಯಾದ ಚಾಲಕ ಮತ್ತು ನಿರ್ವಾಹಕರಿಗೆ ನಗದು ಬಹುಮಾನಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಸಹಾಯಕ ಸಂಚಾರ ವ್ಯವಸ್ಥಾಪಕಿ ರೋಹಿಣಿ ಬೇವಿನಕಟ್ಟಿ, ಸಂಚಾರ ಅಧೀಕ್ಷಕ ಐ.ಜಿ.ಮಾಗಾಮಿ ನಿಲ್ದಾಣಾಧಿಕಾರಿಗಳಾದ ಕುರ್ತಕೋಟಿ, ಕೋಟೂರ, ಪಿ ಎಸ್ ಶೆಟ್ಟರ್  ಮತ್ತು ಕಾರಡ್ಡಿ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *