ಅಟ್ಟಾಡಿಸಿಕೊಂಡು ದಂಪತಿಗಳ ಕೊಲೆ: ಪರಾರಿಯಾದ ಹಂತಕರು
ಕಲಬುರಗಿ: ದಂಪತಿಗಳ ಮೇಲೆ ಹಳೇಯ ದ್ವೇಷಯಿಟ್ಟುಕೊಂಡಿದ್ದ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಇಬ್ಬರನ್ನೂ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ದಿನಸಿ ತಾಂಡಾದಲ್ಲಿ ನಡೆದಿದೆ. ನಿನ್ನೆ ಮಧ್ಯರಾತ್ರಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು, ಘಟನೆಯಲ್ಲಿ ಮಾರುತಿ ಹಾಗೂ ಶಾರದಾಬಾಯಿ ಸಾವಿಗೀಡಾಗಿದ್ದಾರೆ.
ಮನೆಯ ಮುಂಭಾಗದಲ್ಲಿ ಮಾರುತಿಯನ್ನ ಹರಿತವಾದ ಆಯುಧದಿಂದ ಹೊಡೆಯಲಾಗಿದ್ದು, ಆತ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಗಂಡನ ಉಳಿಸಲು ಬಂದವಳಿಗೂ ಹೊಡೆಯಲಾಗಿದ್ದು, ಆಕೆ ಮನೆಯೊಳಗೆ ಹೋಗಿ ಪ್ರಾಣವನ್ನ ಬಿಟ್ಟಿದ್ದಾಳೆ.
ಶಾರದಾಬಾಯಿಯ ರಕ್ತ ಮನೆಯಂಗಳದ ತುಂಬ ಹರಡಿದ್ದು, ಬೆಳಿಗ್ಗೆ ಸ್ಥಳೀಯರು ನೋಡಿ ಗಾಬರಿಯಾಗಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಕಮಲಾಪುರ ಪೊಲೀಸ್ ಠಾಣಾ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಅಕ್ಕಪಕ್ಕದವರ ವಿಚಾರಣೆ ನಡೆದಿದ್ದು, ದುಷ್ಕರ್ಮಿಗಳ ಬಂಧನಕ್ಕಾಗಿ ಜಾಲ ಬೀಸಲಾಗಿದೆ.