ಡಿಕೆಶಿ ಭೇಟಿ: ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಅವಕಾಶ ನೀಡದ ನ್ಯಾಯಾಲಯ…!
1 min readಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಭೇಟಿಗೆ ಅವಕಾಶ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 82 ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ ಅವಕಾಶ ನಿರಾಕರಿಸಿದೆ.
ಡಿ.ಕೆ. ಶಿವಕುಮಾರ ಅವರ ಪರ ವಕೀಲ ಮಂಜುನಾಥ ಎಂ.ಆರ್. ಅವರು ಇಮೇಲ್ ಮೂಲಕ ಸಲ್ಲಿಸಿದ್ದ ಈ ಅರ್ಜಿಯನ್ನು ಡಿ.ಕೆ. ಶಿವಕುಮಾರ್ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ಸಿಬಿಐ ಬಂಧಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಯನ್ನು ಭೇಟಿಯಾಗಲು ಕಾನೂನು ತೊಡಕುಗಳೇನಾದರೂ ಇದೆಯಾ ಎಂಬುದರ ಕುರಿತು ವರದಿಸಲ್ಲಿಸಲು ಬೆಳಗಾವಿಯ ಹಿಂಡಲಗಾ ಜೈಲಿನ ಮುಖ್ಯ ಅಧೀಕ್ಷರಿಗೆ ಸೂಚನೆ ನೀಡಿತ್ತು.
ಅದರಂತೆ ನ್ಯಾಯಾಲಯದ ಗಮನ ಸೆಳೆದ ಬೆಳಗಾವಿಯ ಹಿಂಡಲಗಾ ಜೈಲಿನ ಅಧಿಕಾರಿಗಳು ಹಾಜರಾಗಿ ಸದ್ಯ ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿದೆ. ಹೀಗಾಗಿ ಮುಖಾಮುಖಿ ಭೇಟಿಗೆ ಅವಕಾಶವಿಲ್ಲ. ಜೊತೆಗೆ ಅವರು ಜೈಲಿಗೆ ಲಿಖಿತ ಮನವಿ ಸಲ್ಲಿಸಿಲ್ಲ. ಮತ್ತು ಭೇಟಿಯಾಗಲು ಅವರ ನೀಡಿದ ಕಾರಣ ಸಮರ್ಪಕವಾಗಿ ಇಲ್ಲ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಮಾಜಿ ಸಚಿವ ವಿನಯ ಕುಲಕರ್ಣಿ ಭೇಟಿಯಾಗಲು ನ್ಯಾಯಾಲಯ ಪರವಾನಿಗೆ ನೀಡದಿರುವುದು ಇಬ್ಬರಿಗೂ ನಿರಾಶೆಯನ್ನು ಮೂಡಿಸಿದೆ.
ಜೈಲು ಅಧಿಕಾರಿಗಳ ವರದಿ ಬಳಿಕ ಬೆಂಗಳೂರಿನ 82 ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು ಈ ಮಹತ್ವದ ಆದೇಶ ಹೊರಡಿಸಿದೆ. ಇದು ಮಾಜಿ ಸಚಿವ ವಿನಯ ಕುಲಕರ್ಣಿ ಅಭಿಮಾನಿಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಹತಾಶೆ ಮೂಡಿಸಿದೆ ಎಂದರೆ ತಪ್ಪಾಗಲಾರದು.