ದಿನೇಶ ಕಲ್ಲಹಳ್ಳಿಗೆ ಸಿಡಿ ಕೈಗೆ ಬಂದಿದ್ದು “ಆ” ಲಾಡ್ಜನಲ್ಲಿ…!

ಬೆಂಗಳೂರು: ಜಲ ಸಂಪನ್ಮೂಲ ಖಾತೆಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಒಳಗೊಂಡಿದೆ ಎನ್ನಲಾದ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಲಭಿಸಿದೆ.

ಪ್ರಕರಣದ ಜಾಡು ಹಿಡಿದು ಹೊರಟಿದ್ದ ಸಿಸಿಬಿ, ಕಬ್ಬನ್ ಪಾರ್ಕ್ ಪೊಲೀಸರಿಗೆ ಸಾಮಾಜಿಕ ಕಾರ್ಯಕರ್ತ ದೂರುದಾರ ದಿನೇಶ್ ಕಲ್ಲಹಳ್ಳಿ ಅವರಿಗೆ ರಾಸಲೀಲೆ ಸಿಡಿ ಯಾವ ಸ್ಥಳದಿಂದ ಲಭ್ಯವಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಸಿಡಿ ಬಿಡುಗಡೆಗೂ ಮುನ್ನ ಮಾರ್ಚ 1ರಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ರಾಮಕೃಷ್ಣ ಲಾಡ್ಜ್ ನಲ್ಲಿ ದಿನೇಶ್ ಕಲ್ಲಹಳ್ಳಿ, ಸಂತ್ರಸ್ತೆ ಕುಟುಂಬದ ಸ್ನೇಹಿತನನ್ನು ಭೇಟಿ ಮಾಡಿದ್ದರು. ಆ ಸ್ಥಳದಲ್ಲೇ ವ್ಯಕ್ತಿ ಓರ್ವನಿಂದ ದಿನೇಶ್ ಸಿಡಿ ಪಡೆದಿದ್ದರಂತೆ.
ಬುಧವಾರ ಸಂಜೆ ರಾಮಕೃಷ್ಣ ಲಾಡ್ಜ್ಗೆ ಪೊಲೀಸರು ಭೇಟಿ ನೀಡಿ, ಲಾಡ್ಜ್ನಲ್ಲಿದ್ದ ಸಿಸಿ ಕ್ಯಾಮೆರಾ, ಡಿವಿಆರ್ ವಶಕ್ಕೆ ಪಡೆದಿದ್ದಾರೆ. ದಿನೇಶ್ ಕಲ್ಲಹಳ್ಳಿ ಭೇಟಿ ಮಾಡಿದ್ದ ವ್ಯಕ್ತಿ ಹಾಗೂ ಅವರಿಬ್ಬರು ಮಾತನಾಡುತ್ತಿರುವ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಿನೇಶ್ ಕಲ್ಲಹಳ್ಳಿಗೆ ಸಿಡಿ ಪಡೆದುಕೊಂಡಿದ್ದ ದಿನದಂದು ಲಾಡ್ಜ್ನಲ್ಲಿ ಕರ್ತವ್ಯದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ದೃಶ್ಯಾವಳಿಗಳನ್ನು ಬೇರೆ ಯಾರಿಗೂ ನೀಡದಂತೆ ತಾಕೀತು ಮಾಡಿದ್ದಾರೆಂದು ಹೇಳಲಾಗಿದೆ.