ಈ ಪ್ರೀತಿ.. ಈ ಪ್ರೇಮಾ.. ಎಲ್ಲಾ ಪುಸ್ತಕದ್ದ್ ಬದ್ನೇಕಾಯಿ… ಅಲ್ಲಾ ಮದುವೆ..!

ಧಾರವಾಡ: ಇದು ಗ್ರಾಮೀಣ ಪ್ರದೇಶದ ಪ್ರೀತಿ ಪ್ರೇಮ ಮತ್ತು ಮದುವೆಯ ವರದಿ. ಯಥಾಪ್ರಕಾರ ಎಲ್ಲ ಕಥೆಗಳಲ್ಲೂ ಇರುವಂತೆ ಹುಡುಗ-ಹುಡುಗಿ ಮನೆಯಲ್ಲಿ ವಿರೋಧ. ಇಲ್ಲಿಯೂ ಅದೇ ಆಗಿತ್ತು. ಆದರೆ, ಆ ಕುಟುಂಬಗಳಲ್ಲಿ ಪ್ರೀತಿಗೆ ಬೆಲೆ ಬರುವಂತೆ ಮಾಡಿದ್ದು ಮತ್ತೂ ಆ ಜೀವಗಳನ್ನ ಮನೆಯವರು ಒಪ್ಪಿಕೊಳ್ಳುವಂತೆ ಮಾಡಿದ್ದು ಮಾತ್ರ ಸಾಧನಾ ಮಹಿಳಾ ಸಾಂತ್ವನ ಕೇಂದ್ರದ ಡಾ.ಇಸಬೆಲ್ಲಾ ಝೇವಿಯರ್..
ಧಾರವಾಡ ತಾಲೂಕಿನ ಕೋಟೂರ ಗ್ರಾಮದ ಮಹೇಶ ತಳವಾರ, ಬೇಲೂರ ಗ್ರಾಮದ ದೀಪಾ ದೊಡಮನಿ ಎಂಬುವಳನ್ನ ಪ್ರೀತಿಸಿ ಮದುವೆಯಾಗಿದ್ದ. ಆದರೂ ಮನೆಯಲ್ಲಿ ಕಿರಿಕಿರಿ ಹೆಚ್ಚಾಗಿತ್ತು. ಅದೇ ಕಾರಣಕ್ಕೆ ಅವರಿಬ್ಬರೂ ಸಹಾಯ ಕೇಳಿ ಬಂದಿದ್ದು, ಧಾರವಾಡದಲ್ಲಿರುವ ಸಾಧನಾ ಮಹಿಳಾ ಸಾಂತ್ವನ ಕೇಂದ್ರಕ್ಕೆ. ಆಗ, ಸಹಾಯಕ್ಕೆ ನಿಂತಿದ್ದೇ ಡಾ.ಇಸ್ ಬೆಲ್ಲಾ ಝೇವಿಯರ್ ಎಂಬ ಮಾನವೀಯತೆಯ ಸಾಕಾರಮೂರ್ತಿ.
ಯಾವುದೇ ಜಾತಿ-ಧರ್ಮಗಳಿಗಿಂತ ಮನಸ್ಸುಗಳಿಗೆ ಬೆಲೆ ಕೊಡಬೇಕೆಂಬ ನಿರ್ಣಯದೊಂದಿಗೆ ಮುಂದೆ ಹೋದ ಡಾ.ಇಸಬೆಲ್ಲಾ, ಎರಡು ಕುಟುಂಬಗಳ ಜೊತೆ ಮಾತನಾಡಿ, ಬೀದಿ ಬೀದಿ ಅಲೆಯಬೇಕಾಗಿದ್ದ ದಂಪತಿಗಳನ್ನ ಅವರ ಮನೆಗೆ ಹೋಗುವಂತೆ ಮಾಡಿದ್ದಾರೆ.
ಗರಗ ಪೊಲೀಸ್ ಠಾಣೆಯಲ್ಲಿಯೂ ಪಿಎಸ್ಐ ಕಿರಣಕುಮಾರ, ಹುಡುಗಿಯ ಸಹೋದರ ಸುರೇಶ ದೊಡಮನಿ, ಬಸವರಾಜ ಯಾದವಾಡ ಸೇರಿದಂತೆ ಎರಡು ಮನೆಯ ಹಿರಿಯರನ್ನ ಕೂಡಿಸಿ, ಬೀಗರನ್ನಾಗಿಸಿ ಆತ್ಮತೃಪ್ತಿಯೊಂದಿಗೆ ಹೊರಗೆ ಬಂದಿದ್ದಾರೆ, ಇಸಬೆಲ್ಲಾ ಝೇವಿಯರ್.
ತಾವೇ ಪ್ರೀತಿಸಿ ಮದುವೆಯೂ ಆಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಮಹೇಶ ಹಾಗೂ ದೀಪಾ ತಮ್ಮ ಜೀವನವನ್ನ ಮಾದರಿಯಾಗುವಂತೆ ಬದುಕಿ ತೋರಿಸಬೇಕಿದೆ. ಹೀಯಾಳಿಸಿದವರ ವಿರುದ್ಧ ಚೆನ್ನಾಗಿದ್ದು ಜೀವನ ನಡೆಸಬೇಕಿದೆ. ಆಗಲೇ ಸಾಧನಾ ಸಂಸ್ಥೆಯ ಡಾ.ಇಸಬೆಲ್ಲಾ ಝೇವಿಯರ್ ಅವರ ಕಾರ್ಯ ಸಾರ್ಥಕತೆ ಕಾಣುವುದಲ್ಲವೇ..!