15ಗಂಟೆಯಲ್ಲಿ 6 ರಸ್ತೆ ಅಪಘಾತ: ಹಲವರಿಗೆ ಗಾಯ, ನಾಲ್ವರಿಗೆ ತೀವ್ರ ಗಾಯ..!
1 min readಧಾರವಾಡ: ಅವಳಿನಗರವೂ ಸೇರಿದಂತೆ ಕಳೆದ 15 ಗಂಟೆಗಳಲ್ಲಿ ಸುಮಾರು ಆರು ಅಪಘಾತಗಳು ಧಾರವಾಡ ಜಿಲ್ಲೆಯಲ್ಲಿ ನಡೆದದ್ದು, ಹಲವರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಓರ್ವ ಬಾಲಕ ಸೇರಿದಂತೆ ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿವೆ.
ಧಾರವಾಡದ ಸತ್ತೂರ ಬಳಿಯಿರುವ ಡೆಂಟಲ್ ಆಸ್ಪತ್ರೆಯ ಕ್ರಾಸ್ ಬಳಿ ಆಟೋವೊಂದು ಪಲ್ಟಿಯಾದ ಪರಿಣಾಮ, ಮೂವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಟೋ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ. ಆಟೋ ಚಾಲಕ ಸಯ್ಯದತಬ್ರೇಜ್ ಕಿತ್ತೂರ ಎಂಬಾತ ಮೂವರು ಪ್ರಯಾಣಿಕರೊಂದಿಗೆ ಧಾರವಾಡದತ್ತ ಆಗಮಿಸುತ್ತಿದ್ದ ವೇಳೆಯಲ್ಲಿ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ.
ಓರ್ವ ಮಹಿಳೆಯು ಸೇರಿದಂತೆ ಇಬ್ಬರು ಪ್ರಯಾಣಿಕರನ್ನ ತಕ್ಷಣವೇ ಎಸ್ ಡಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಟೋ ಚಾಲಕ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.
ಹುಬ್ಬಳ್ಳಿಯಿಂದ ಧಾರವಾಡದತ್ತ ಬರುತ್ತಿದ್ದ ಬೇಂದ್ರೆ ಸಾರಿಗೆ ಬಸ್ಸೊಂದು ರಾಯಾಪೂರದ ಬಳಿಯ ಎನ್ ಜಿಎಫ್ ಕಂಪನಿಯ ಬಳಿ ಪುಟ್ ಪಾತ್ ಮೇಲೇರಿ ಅವಘಡ ಮಾಡಿಕೊಂಡ ಘಟನೆ ನಡೆದಿದ್ದು, ಬಸ್ಸನ್ನ ನಿಯಂತ್ರಣ ಮಾಡಲು ಹೋಗಿ ಚಾಲಕನಿಗೆ ಅಲ್ಪ ಗಾಯಗಳಾದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಧಾರವಾಡದತ್ತ ಬರುತ್ತಿದ್ದ ಸಮಯದಲ್ಲಿ ಅಡ್ಡ ಬಂದ ಶ್ವಾನವನ್ನ ತಪ್ಪಿಸಲು ಹೋಗಿರುವ ಬೇಂದ್ರೆ ಬಸ್ ಚಾಲಕ, ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ಬಸ್ಸನ್ನ ಹತ್ತಿಸಿದ್ದಾನೆ. ಇದರಿಂದ ಚಾಲಕನಿಗೆ ಸ್ಟೇರಿಂಗ್ ಬಡಿದು ತಲೆಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೇಂದ್ರೆ ಬಸ್ಸಿನ ಅವಘಡದಿಂದ ಹೊಸದಾಗಿ ಹಾಕಿದ್ದ ಪುಟ್ ಪಾತ್ ಕೆಟ್ಟು ಹೋಗಿದೆ.
ಹುಬ್ಬಳ್ಳಿ ತಾಲೂಕಿನ ಹೆಬಸೂರ ಟೋಲ್ ಗೇಟ್ ಬಳಿಯಲ್ಲಿ ವಾಯುವ್ಯ ರಸ್ತೆ ಸಾರಿಗೆ ಬಸ್ಸಿಗೆ ಮಹೇಂದ್ರ ವಾಹನ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಚೆನ್ನಬಸು ಪವಾಡೆಪ್ಪ ಬಡಿಗೇರ ಎಂಬಾತ ಚಲಾಯಿಸುತ್ತಿದ್ದ ಮಹೇಂದ್ರ ವಾಹನ, ನವಲಗುಂದದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ಚಾಲಕ ಕಿರೇಸೂರ ಗ್ರಾಮದ ಬಸಪ್ಪ ಹನಮಂತಪ್ಪ ಕಂಬಳಿ ಹಾಗೂ ಮಹೇಂದ್ರ ವಾಹನದ ಚಾಲಕ ಚೆನ್ನಬಸು ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಡಿಕ್ಕಿ ರಭಸಕ್ಕೆ ವಾಹನಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಆಟೋಗೆ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದು ಕೆಳಗೆ ಉರುಳಿದ ಘಟನೆ ನಡೆದಿದ್ದು, ಇದರಿಂದ ಆಟೋ ಚಾಲಕ ಬೈಕ್ ಸವಾರನಿಗೆ ಹೊಡೆಯಲು ಹೋದ ಸಂದರ್ಭ ನಡೆಯಿತು.
ಧಾರವಾಡದ ವಿವೇಕಾನಂದ ವೃತ್ತದಿಂದ ಜಯನಗರದತ್ತ ಹೊರಟಿದ್ದ ಬೈಕ್ ಸವಾರ ವಿಜಯ ಸತಾರೆ, ಸಿಗ್ನಲ್ ನೀಡದೇ ಇದ್ದರೂ ಮುಂದೆ ಬಂದಿದ್ದಾನೆ. ಆಗ ಎದುರಿಗೆ ಬಂದ ಆಟೋಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ಇದರಿಂದ ಆಕ್ರೋಶಗೊಂಡ ಆಟೋ ಚಾಲಕ ಕುಮಾರ, ಬೈಕ್ ಸವಾರನಿಗೆ ಹೊಡೆಯಲು ಹೋಗಿದ್ದ. ತಕ್ಷಣವೇ ಸಿಗ್ನಲ್ ಬಳಿ ಕಾರ್ಯನಿರ್ವಹಿಸುತ್ತಿದ್ದ ಧಾರವಾಡ ಸಂಚಾರಿ ಠಾಣೆಯ ಪೊಲೀಸ್, ಇಬ್ಬರಿಗೂ ತಿಳುವಳಿಕೆ ನೀಡಿ, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.
ಧಾರವಾಡದ ಹೊಸಯಲ್ಲಾಪುರ ಬಳಿಯ ಬಾಗಲಕೋಟೆ ಪೆಟ್ರೋಲ್ ಪಂಪ್ ಬಳಿಯಲ್ಲಿ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಕಾರು ಚಾಲಕ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಬದುಕುಳಿದ ಘಟನೆ ಸಂಭವಿಸಿದೆ.
ಧಾರವಾಡದ ದಯಾನಂದ ದೋಜಗೋಡೆ ಎಂಬುವವರ ಕಾರಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಕಾರು ಅಡ್ಡವಾಗಿ ತಿರುಗಿದ್ದು, ಕಾರಿನಲ್ಲಿದ್ದ ದಯಾನಂದ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಹುಬ್ಬಳ್ಳಿ-ಧಾರವಾಡ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು, ಕಾರನ್ನ ಅಪಘಾತದ ಸ್ಥಳದಿಂದ ಬೇರೆ ಕಡೆ ಸ್ಥಳಾಂತರ ಮಾಡಿದ್ರು.
ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ಬಳಿಯಲ್ಲಿ ಬೈಕ್ ತಪ್ಪಿಸಲು ಹೋದ ಟಂಟಂ ವಾಹನಕ್ಕೆ ಹಿಂದಿನಿಂದ ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮ, ಟಂಟಂ ಪಲ್ಟಿಯಾದ ಘಟನೆ ನಡೆದಿದೆ.
ಹುಬ್ಬಳ್ಳಿಯ ಬಿಡನಾಳದಿಂದ ಮುಳಗುಂದ ದಾವಲ್ ಮಲೀಕ ದರ್ಗಾಗೆ ಹೊರಟಿದ್ದ ಟಂಟಂ ವಾಹನ, ಬಂಡಿವಾಡ ಬಳಿ ಎದುರಿಗೆ ಬಂದ ಬೈಕನ್ನ ತಪ್ಪಿಸಲು ಹೋಗಿದ್ದಾರೆ. ತಕ್ಷಣವೇ ಹಿಂದಿನಿಂದ ಹುಬ್ಬಳ್ಳಿ ಗಿರಣಿಚಾಳದ 407 ಪ್ಯಾಸೆಂಜರ್ ಟೆಂಪೋ ಡಿಕ್ಕಿ ಹೊಡೆದಿದೆ. ಇದರಿಂದ ಟಂಟಂ ಪಲ್ಟಿಯಾಗಿದೆ.
ವಾಹನದಲ್ಲಿ ರಫೀಕ ಕಾಲೆಬುಡ್ಡೆ ಎಂಬ ಬಾಲಕನಿಗೆ ತೀವ್ರ ಥರದ ಗಾಯಗಳಾಗಿದ್ದು, ಟಂಟಂ ಚಾಲಕ ಅಬ್ದುಲಸಾವ ಕಾಲೆಬುಡ್ಡೆ ಹಾಗೂ ಆತನ ಜೊತೆಗಿದ್ದ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.