ಧಾರವಾಡ ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕಿಮ್ಮತ್ತು..!

ಹುಬ್ಬಳ್ಳಿ: ಲಾಕ್ಡೌನ್ ನಂತರ ಸರಕಾರಿ ಕಚೇರಿಗಳಲ್ಲಿಯ ಸಿಬ್ಬಂದಿಗಳ ಉಡುಗೆ ಜಿನ್ಸ್, ಟೀ ಷರ್ಟ್, ಲೆಗಿಂಗ್ಸ್ ಇವೆಲ್ಲವುಗಳು ಕಾಮನ್ ಆಗಿ ಬಿಟ್ಟಿದ್ದು, ಕಚೇರಿಗೆ ಬರುವ ಸಾರ್ವಜನಿಕರು ಇದರಿಂದ ಗೊಂದಲಕ್ಕೆ ಬೀಳುತ್ತಿದ್ದಾರೆ.
ಸರಕಾರಿ ಕಚೇರಿಗಳಿಗೆ ವಿವಿಧ ಕೆಲಸಗಳಿಗೆ ಭೇಟಿ ನೀಡುವ ಸಾರ್ವಜನಿಕರು ತಮ್ಮ ಸಂಶಯ ಹಾಗೂ ತೊಂದರೆಗಳ ಬಗ್ಗೆ ಯಾರಿಗೆ ಹೇಳಬೇಕೆಂಬ ಗೊಂದಲದಲ್ಲಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಾರ್ವಜನಿಕರ ಹಲವಾರು ಅಹವಾಲು ಹಾಗೂ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸರ್ಕಾರಿ ಸಿಬ್ಬಂದಿಗಳಿಗೆ ಆದೇಶವನ್ನು ಹೊರಡಿಸಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕೆಂದು ಹಾಗೂ ಅವರ ಜವಾಬ್ದಾರಿಯನ್ನು ಅರಿತು ಕಾರ್ಯ ಮಾಡಬೇಕೆಂದು ಸೂಚಿಸಿದ್ದರು. ಆದರೆ, ಜಿಲ್ಲಾಧಿಕಾರಿಗಳ ಆದೇಶಕ್ಕೆ ಯಾರೂ ತಲೆಕೆಡೆಸಿಕೊಂಡಂತೆ ಕಾಣುತ್ತಿಲ್ಲ.
ಜಿಲ್ಲಾಧಿಕಾರಿ ಆದೇಶಕ್ಕೆ ಡೋಂಟ್ ಕೇರ್: ಸಾರ್ವಜನಿಕರು ಅತೀ ಹೆಚ್ಚು ಭೇಟಿ ನೀಡುವಂತಹ ಇಲ್ಲಿನ ಸರಕಾರಿ ಕಚೇರಿಗಳಾದ ತಹಶೀಲ್ದಾರರ ಕಚೇರಿ, ಮಹಾನಗರ ಪಾಲಿಕೆ, ಸಬ್ ರಜಿಸ್ಟ್ರಾರ್ ಕಚೇರಿ, ಖಜಾನೆ, ತಾಲೂಕು ಪಂಚಾಯತ ಹಾಗೂ ಇತರ ಕಚೇರಿಗಳಲ್ಲಿ ಇಂದಿಗೂ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಗಳವರೆಗೆ ಎಲ್ಲರೂ ಎಗ್ಗಿಲ್ಲದೆ ಮಾಡರ್ನ್ ಉಡುಪಿನಲ್ಲಿ ಕಚೇರಿಗೆ ಬರುತ್ತಿದ್ದಾರೆ ಅಲ್ಲದೆ ಜಿಲ್ಲಾಧಿಕಾರಿಗಳ ಆದೇಶ ಡೋಂಟ್ ಕೇರ್ ಮಾಡಿದ್ದಾರೆ.
ಮಾಡರ್ನ್ ಬಟ್ಟೆಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕಂಡು ಯಾವುದಾದರೂ ಕಾಲೇಜ್ ಗೆ ಬಂದಿರುವಹಾಗೆ ಅನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಫ್ಯಾಷನ್ ಮಾಡಲೇಬೇಕೆಂದರೆ ಅಧಿಕಾರಿಗಳು ರಜೆ ಹಾಕಿ ಮನೆಯಲ್ಲಿರುವುದು ಸೂಕ್ತ ಎಂಬ ಅಭಿಪ್ರಾಯವನ್ನ ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ನಾನಾ ಕ್ರಿಯಾಶೀಲ ಕಾರ್ಯಗಳಿಂದ ಜಿಲ್ಲೆಯ ಖಡಕ್ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ನಿತೇಶ ಪಾಟೀಲ ಅವರು ತಮ್ಮ ಆದೇಶವನ್ನು ಗಾಳಿಗೆ ತೂರಿರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವರೆ..? ಕಾದು ನೋಡಬೇಕು.