22 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಲು ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
        ಹುಬ್ಬಳ್ಳಿ: ಒಂದು ವಾರದಲ್ಲಿ ಕೋವಿಡ್ ಲಸಿಕೆ ಲಭಿಸುವ ಸಾಧ್ಯತೆ ಇದೆ. ಮೊದಲ ಹಂತದ ಕೋವಿಡ್ ಲಸಿಕಾ ಅಭಿಯಾನದಲ್ಲಿ ಧಾರವಾಡ ಜಿಲ್ಲೆಯಲ್ಲಿ 22 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದ ಕೋವಿಡ್ ಅಣಕು ಲಸಿಕಾ ತಾಲೀಮು ವೀಕ್ಷಿಸಿ ಮಾತನಾಡಿದರು. 110 ಕೋವಿಡ್ ಲಸಿಕಾ ಕೇಂದ್ರಗಳನ್ನು ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರಗಳ ಅನುಸಾರ ಸಿದ್ದಪಡಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳನ್ನು ಕಾರ್ಯನಿರತ ಆಸ್ಪತ್ರೆಗಳಲ್ಲೇ ಸ್ಥಾಪಿಸಲಾಗುತ್ತಿದೆ. ಏನಾದರೂ ಅಡ್ಡ ಪರಿಣಾಮಗಳು ಕಂಡು ಬಂದರೆ ಸ್ಥಳದಲ್ಲೇ ತುರ್ತ ಚಿಕಿತ್ಸೆ ನೀಡಲು ಪ್ರತಿ ಆಸ್ಪತ್ರೆಯಲ್ಲಿ ಬೆಡ್ಗಳನ್ನು ಕಾಯ್ದಿರಿಸಲಾಗುತ್ತಿದೆ. ಪ್ರತಿ ಲಸಿಕಾ ಕೇಂದ್ರದಲ್ಲೂ ಲಸಿಕೆ ಅಡ್ಡಪರಿಣಾಮದ ಉಪಶಮನದ ಕಿಟ್ಗಳು ಇರಲಿವೆ. ಸೂಕ್ತ ತರಬೇತಿ ಹೊಂದಿದ 5 ಜನರ ತಂಡ, ಪ್ರತಿ ಲಸಿಕಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಲಸಿಕೆ ಪಡೆವ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ. ಸ್ಥಳದಲ್ಲಿ ಮಾಹಿತಿ ಪರಿಶೀಲಸಿ ಕೋವಿನ್ ತಂತ್ರಾಂಶದಲ್ಲಿ ನೊಂದಾಯಿಸಿ ಲಸಿಕೆ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹೆಸರು ಪಟ್ಟಿಯಲ್ಲಿ ಇರದಿದ್ದರೆ. ಸಂಸ್ಥೆಯ ಮೂಲಕ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ 10 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಕಿಮ್ಸ್ ಎಲ್ಲಾ ಸಿಬ್ಬಂದಿಗಳಿಗೆ ಇಲ್ಲಿಯೇ ಲಸಿಕೆ ನೀಡಲಾಗವುದು. ಜಿಲ್ಲೆಯಲ್ಲಿ ಎರೆಡು ದಿನಗಳ ಕಾಲ ಲಸಿಕಾ ಅಭಿಯಾನ ಜರುಗುವುದು. ಪ್ರತಿ ಕೇಂದ್ರದಲ್ಲಿ ದಿನಂಪ್ರತಿ 100 ಜನರಿಗೆ ಲಸಿಕೆ ನೀಡಲಾಗುವುದು. ಲಸಿಕೆ ಅಭಿಯಾನ ಎರೆಡು ದಿನದಲ್ಲಿ ಪೂರ್ಣವಾಗದಿದ್ದರೆ. ಮೂರನೆ ದಿನವೂ ಲಸಿಕೆ ಅಭಿಯಾನ ಮುಂದುವರಿಸಲಾಗುವುದು.
ನಿರ್ದೇಶನದಂತೆ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ದ್ವಿತೀಯ ಹಂತದಲ್ಲಿ ಕೊರೋನಾ ವಾರಿಯರ್ಸ್, 50 ವರ್ಷ ಮೇಲ್ಪಟ್ಟರು ಹಾಗೂ ಕೋವಿಡ್ ತುತ್ತಾಗುವ ಸಂಭವವಿರುವ ರೋಗಿಗಳಿಗೆ ನೀಡಲಾಗುವುದು. ಪೊಲೀಸ್, ಸೇನೆ ಸೇರಿದಂತೆ ಇತರೆ ರಕ್ಷಣಾ ಪಡೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 40 ರಿಂದ 50 ಸಾವಿರ ಜನರ ನೊಂದಣಿಯಾಗುವ ನಿರೀಕ್ಷೆಯಿದೆ. ನೊಂದಣಿಯಾಗಿರುವವರು ಸ್ವ-ಇಚ್ಛೆಯಿಂದ ಲಸಿಕೆ ಪಡದುಕೊಳ್ಳಬೇಕು. ಯಾವುದೇ ಒತ್ತಾಯ ಇಲ್ಲ. ಕೋವಿನ್ ತಂತ್ರಾಂಶ ನಿರ್ವಹಣೆಯಲ್ಲಿ ಯಾವುದೇ ತೊಂದರೆ ಇದುವರೆಗೂ ಕಂಡುಬಂದಿಲ್ಲ. ನೊಂದಣಿ ವೇಳೆ ತೊಂದರೆ ಕಂಡುಬಂದರೆ ನಿರ್ವಹಣೆ ವಿಭಾಗಕ್ಕೆ ವರದಿ ನೀಡಲಾಗುವುದು ಎಂದರು.
ಕೋವಿಡ್ ಲಸಿಕೆ ಸಂಗ್ರಹಣೆ ಹಾಗೂ ರವಾನೆಗೆ ಸೂಕ್ತ ವ್ಯವಸ್ಥೆ: ಜಿಲ್ಲೆಯಲ್ಲಿ 61 ಶೈತ್ಯಾಗಾರದಲ್ಲಿ ಲಸಿಕೆ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ, ಕಿಮ್ಸ್, ಎಸ್.ಡಿ.ಎಂ. ಆಸ್ಪತ್ರೆಗಳಲ್ಲಿ ಲಸಿಕೆ ಸಂಗ್ರಹಿಸಲಾಗುವುದು. ವಿವಧ ಸ್ಥಳಗಳಿಗೆ ತೆರಳಿ ಲಸಿಕೆ ನೀಡಲು ವಾಕಿನ್ಕೂಲರ್ಗಳಿವೆ. ರಾಜ್ಯ ಸರ್ಕಾರದಿಂದ ಜಿಲ್ಲೆಗೆ 98 ಲೀಟರ್ ಸಾಮರ್ಥ್ಯದ ಐ.ಎಲ್.ಆರ್. (ಐಸ್ ಲೈನಲ್ಡ್ ರೆಫ್ರಿಜಿರೇಟರ್) ನೀಡಲಾಗಿದೆ. ಇದರಲ್ಲಿ 21600 ಲಸಿಕಾ ಡೋಸ್ಗಳನ್ನು ಸಂಗ್ರಹಿಸಬಹುದು. ಅಗತ್ಯ ಬಿದ್ದರೆ ಜಿಲ್ಲಾ ಆಸ್ಪತ್ರೆಯ ಔಷಧ ಉಗ್ರಾಣ ಕೇಂದ್ರ ಶೈತ್ಯಾಗಾರದಲ್ಲಿ ಕೋವಿಡ್ ಲಸಿಕೆಗಳನ್ನು ಸಂಗ್ರಹಿಸಿಡಲಾಗುವುದು. ಯಾವುದೇ ರೀತಿಯ ಸಂಗ್ರಹ ಸಾಮರ್ಥ್ಯದ ಕೊರತೆಯಿಲ್ಲ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್, ಡಾ.ಲಕ್ಷ್ಮೀಕಾಂತ್ ಸೇರಿದಂತೆ ಇತರೆ ಆರೋಗ್ಯ ಸಿಬಂದಿ ಉಪಸ್ಥಿತರಿದ್ದರು.
                      
                      
                      
                      
                      
                        
