ಸಲಿಕೆ-ಗುದ್ದಲಿ ಸಮೇತ ಜಿಲ್ಲಾಧಿಕಾರಿ ಕಛೇರಿಗೆ ಬಂದ ಮಹಿಳೆಯರು ಮಾಡಿದ್ದೇನು ಗೊತ್ತಾ..?
ಧಾರವಾಡ: ನರೇಗಾ ಯೋಜನೆಯಲ್ಲಿ ಗ್ರಾಮದ ಜನರಿಗೆ ಕೆಲಸ ನೀಡುವಂತೆ ಆಗ್ರಹಿಸಲು ಗುಳೇದಕೊಪ್ಪ ಗ್ರಾಮಸ್ಥರು, ಗುದ್ದಲಿ-ಸಲ್ಲಿಕೆ ಸಮೇತ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟಿಸಿದ್ರು.
ರೈತ- ಕೃಷಿ ಕಾರ್ಮಿಕರ ಸಂಘಟನೆಯ ಮೂಲಕ ಪ್ರತಿಭಟಿಸಿದ ಗ್ರಾಮಸ್ಥರು, ಗ್ರಾಮೀಣ ಜನರಿಗೆ ಅನುಕೂಲವಾಗುವ ಯೋಜನೆಯನ್ನ ಜಾರಿಗೆ ತರಲು ಹಿಂದೇಟು ಏಕೆ ಹಾಕಲಾಗುತ್ತಿದೆ ಎಂದು ಪ್ರಶ್ನಿಸಿದರು.
ಗುಳೇದಕೊಪ್ಪ ಗ್ರಾಮದಲ್ಲಿ ಕೇವಲ 25 ದಿನ ಮಾತ್ರ ಕೆಲಸವನ್ನ ನೀಡಲಾಗಿದೆ. ಪಂಚಾಯತಿಯವರನ್ನ ಕೇಳಿದರೇ ನಿಮಗೆ ಕೆಲಸ ಕೊಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ನರೇಗಾ ಯೋಜನೆಯಡಿ ಕೆಲಸ ಪ್ರಾರಂಭಿಸಬೇಕೆಂದು ಇದೇ ಸಮಯದಲ್ಲಿ ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ, ಶರಣು ಗೋನವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.