ಧಾರವಾಡದ ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿಯ “ಕಲ್ಲಂಗಡಿ” ಹಾಳು- ಬಿಗಿ ಪೊಲೀಸ್ ಬಂದೋಬಸ್ತ್….

ಧಾರವಾಡ: ಪ್ರತಿಷ್ಠಿತ ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರು ಇಂದು ಏಕಾಏಕಿ ಕೆಲ ಮುಸ್ಲಿಂ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.
ನುಗ್ಗಿಕೇರಿಯಲ್ಲಿ ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಬಿಸಾಬ ಎಂಬುವವರಿಗೆ ಸೇರಿದ ಅಂಗಡಿ ಮೇಲೆ ದಾಳಿ ಮಾಡಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅವರ ಅಂಗಡಿಯಲ್ಲಿದ್ದ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದರು.
ಇತ್ತೀಚೆಗಷ್ಟೆ ಹಿಂದೂ ದೇವಾಲಯಗಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬಾರದು ಎಂದು ಅಭಿಯಾನ ಪ್ರಾರಂಭವಾಗಿತ್ತು. ಕಳೆದ ಕೆಲ ದಿನಗಳ ಹಿಂದಷ್ಟೇ ಶ್ರೀರಾಮ ಸೇನೆ ಕಾರ್ಯಕರ್ತರು ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬಾರದು ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿಯವರಿಗೆ ಮನವಿ ಸಲ್ಲಿಸಿದ್ದರು.
ಇನ್ನು ಹೊರಗಡೆ ಗಲಾಟೆಯಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿಲ್ಲ. ಈ ಬಗ್ಗೆ ದೇವಸ್ಥಾನದ ಟ್ರಸ್ಟ್ ಕಮೀಟಿಯವರು ಸೇರಿಕೊಂಡು ಸಭೆ ನಡೆಸಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ನರಸಿಂಹಸ್ವಾಮಿ ದೇಸಾಯಿ ಹೇಳಿದರು.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿದ್ದರಿಂದ ಮುಸ್ಲಿಂ ವ್ಯಾಪಾರಸ್ಥ ನಬಿಸಾಬ ಸಾಕಷ್ಟು ನಷ್ಟ ಅನುಭವಿಸುವಂತಾಗಿದ್ದು, ತನ್ನ ನಷ್ಟ ಭರಿಸಿಕೊಡುವಂತೆ ನಬಿಸಾಬ ಕಣ್ಣೀರು ಕೂಡ ಹಾಕಿದ್ದಾರೆ. ಬರುವ ದಿನಗಳಲ್ಲಿ ಈ ಒಂದು ಘಟನೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.