ನರೇಂದ್ರ ಗ್ರಾಮದ “ದೇವರು” ಶ್ರೀ ದುಂಡಯ್ಯ ಸ್ವಾಮಿಗಳು ಲಿಂಗೈಕ್ಯ…

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ದೇವರು ಎಂದೇ ಖ್ಯಾತಿ ಪಡೆದಿದ್ದ ಮಳೆಪ್ಪಜ್ಜನ ಮಠದ ವೇದಮೂರ್ತಿ ಪರಮಪೂಜ್ಯ ಶ್ರೀ ದುಂಡಯ್ಯ ಸ್ವಾಮೀಜಿಗಳು ಇಂದು ಸಂಜೆ ಗ್ರಾಮದಲ್ಲಿ ಲಿಂಗೈಕ್ಯರಾದರು.
ಶ್ರೀಗಳ ಲಿಂಗೈಕ್ಯರಾದ ವಿಷಯ ಭಕ್ತರಲ್ಲಿ ತೀವ್ರ ನೋವನ್ನುಂಟು ಮಾಡಿದ್ದು, ಶ್ರೀಗಳ ಆತ್ಮಕ್ಕೆ ಭಕ್ತರು ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಿದ್ದಾರೆ.
ಮಾಜಿ ಶಾಸಕ ಅಮೃತ ದೇಸಾಯಿ ಅವರು ಶ್ರೀಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ನರೇಂದ್ರದ ಪೂಜ್ಯರು ಲಿಂಗೈಕ್ಯ
ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನ ಮಠದ ಪೀಠಾಧಿಪತಿ ವೇ.ಮೂ.
ಶ್ರೀ ದುಂಡಯ್ಯ ಹಿರೇಮಠ ಅವರು ಆ.11 ರಂದು ರವಿವಾರ ಸಂಜೆ 7.25 ಕ್ಕೆ ಲಿಂಗೈಕ್ಯರಾದರು.
ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಸಂಖ್ಯಾತ ಭಕ್ತ ಸಮೂಹವನ್ನು ಅಗಲಿದ್ದಾರೆ.
ಹಾಲಿ ಪೀಠಾಧ್ಯಕ್ಷರಾದ ಶ್ರೀ ಸಂಗಮೇಶ ಸ್ವಾಮೀಜಿ ಅವರು, ದುಂಡಯ್ಯ ಸ್ವಾಮೀಜಿಯವರ ಮೊಮ್ಮಗ.
ಮೌನಯೋಗಿ ಮಹಾಂತ ಶಿವಯೋಗಿ ಅವರ ಪೂರ್ವಾಶ್ರಮದ ಸಹೋದರರಾದ ಶ್ರೀ ದುಂಡಯ್ಯ ಹಿರೇಮಠ (ಸ್ವಾಮೀಜಿ),ಮಹಾಂತ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಮಳೆಪ್ಪಜ್ಜನ ಮಠದ ಉತ್ತರಾಧಿಕಾರಿ ಆಗಿದ್ದರು.
ಗೃಹಸ್ಥರಾದ ದುಂಡಯ್ಯ ಸ್ವಾಮೀಜಿಗಳು
ತಮ್ಮ ಜೀವನದುದ್ದಕ್ಕೂ ಮಠದ ಕಲ್ಯಾಣ ಮಾಡುತ್ತ ಭಕ್ತರ ಪರಮಗುರುಗಳಾಗಿದ್ದರು.
ಸೋಮವಾರ ಅಂತ್ಯಕ್ರಿಯೆ:
ಮಠದ ಆವರಣದಲ್ಲಿ ಅವರ ಜೀವಿತಾವಧಿಯಲ್ಲಿಯೇ ನಿರ್ಮಾಣ ಮಾಡಿರುವ ಕ್ರಿಯಾಸಮಾಧಿಯಲ್ಲಿ ಅಂತ್ಯೇಷ್ಠಿಯ ವಿಧಿವಿಧಾನಗಳನ್ನು ಸೋಮವಾರ ಅಪರಾಹ್ನ 3 ಗಂಟೆಗೆ
ಅಂತ್ಯಕ್ರಿಯೆ ನಡೆಯಲಿದೆ.
ಸಂತಾಪ : ದುಂಡಯ್ಯ ಸ್ವಾಮೀಜಿಯವರ ಲಿಂಗೈಕ್ಯರಾಗಿದ್ದಕ್ಕೆ ಉಪ್ಪಿನ ಬೆಟಗೇರಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮೀಜಿ, ಶಿರಕೋಳದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯರು, ಅಮ್ಮಿನಬಾವಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು, ಇನಾಮಹೊಂಗಲದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ,
ಕಲ್ಯಾಣದ ಪಂಡಿತರಾಧ್ಯರು, ಹೊಸೂರು, ನಯಾನಗರ ಸೇರಿದಂತೆ ನಾಡಿನ ಆನೇಕ ಗುರು-ವಿರಕ್ತರು, ಗಣ್ಯರು ಶೋಕ ವ್ಯಕ್ತಪಡಿಸಿರುವರು.