ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆ ಫುಟ್ ಪಾತ್ ತೆರವು
ಧಾರವಾಡ: ನಗರದ ಹಲವೆಡೆ ಇಂದು ಬೆಳ್ಳಂಬೆಳಿಗ್ಗೆ ಪುಟ್ ಪಾತ್ ತೆರವು ಕಾರ್ಯಕ್ಕೆ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಠಾಣೆ ಪೊಲೀಸರು ಮುಂದಾಗಿದ್ದು, ಕೆಲವೆಡೆ ವಿರೋಧವ್ಯಕ್ತವಾದ ಘಟನೆಯು ನಡೆದಿದೆ.
ಧಾರವಾಡದ ಲೈನ್ ಬಜಾರ್, ಸೂಪರ್ ಮಾರುಕಟ್ಟೆ ಹಾಗೂ ಕೆಸಿಡಿ ವೃತ್ತದ ಬಳಿ ಸೇರಿದಂತೆ ಪ್ರಮುಖ ಜಾಗದಲ್ಲಿ ಪುಟ್ ಪಾತ್ ಅತಿಕ್ರಮಣ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದ ಅಂಗಡಿ-ಮುಗ್ಗಟ್ಟುಗಳನ್ನ ತೆರವು ಮಾಡಿದರು.
ಮಹಾನಗರ ಪಾಲಿಕೆ ಸಿಬ್ಬಂದಿಗಳ ಜೊತೆಗೆ ಸಂಚಾರಿ ಠಾಣೆ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ನೇತೃತ್ವದಲ್ಲಿ ತೆರವು ನಡೆಯುತ್ತಿದ್ದ ಸಮಯದಲ್ಲಿ ಸೂಪರ್ ಮಾರ್ಕೆಟ್ ಬಳಿ ಕೆಲವರು ತಗಾದೆ ತೆಗೆದರು. ಆದರೂ, ಅದನ್ನ ಲೆಕ್ಕಿಸದೇ ತೆರವು ಕಾರ್ಯಾಚರಣೆ ಮುಂದುವರೆದಿತ್ತು.
ಧಾರವಾಡದ ಮಾರುಕಟ್ಟೆ ಪ್ರದೇಶದ ಬಹುತೇಕ ರಸ್ತೆಗಳನ್ನ ಗೂಡಂಗಡಿಕಾರರು ವ್ಯವಹಾರಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಯಾವುದೇ ರೀತಿಯ ವಾಹನ ಸಂಚಾರವೂ ನಡೆಯದಂತಾಗಿದ್ದರಿಂದ ತೆರವು ಕಾರ್ಯಾಚರಣೆ ನಡೆಯಿತು.