ಧಾರವಾಡ “ಡಿಡಿಪಿಐ” ಕಚೇರಿಯಲ್ಲಿ ಯಾವ ಶಾಸಕರಿಗೆ ಎಷ್ಟು ಬೆಲೆ ಗೊತ್ತಾ…

ಧಾರವಾಡ: ಜಿಲ್ಲೆಯಲ್ಲಿ ರಾಜಕಾರಣಿಗಳು ರಾಜಕಾರಣ ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ, ರಾಜಕಾರಣಿಗಳ ನಡುವೆ ಬೆಂಕಿ ಹಚ್ಚುವ ಕಾರ್ಯಕ್ರಮ ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂಬ ಗುಸುಗುಸು ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಹಬ್ಬಿದೆ.
ತಾವೂ ಶಿಕ್ಷಕರಾಗಿ ಹುದ್ದೆಗಳನ್ನ ಪಡೆಯುತ್ತ ಇದೀಗ ಡಿಡಿಪಿಐ ಆಗಿರುವ ಎಸ್.ಎಸ್.ಕೆಳದಿಮಠ ಅವರು ಕಾಂಗ್ರೆಸ್ ಪಕ್ಷದ ಶಾಸಕರ ಪತ್ರಗಳನ್ನ ಪಡೆದು, ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ.
ರಾಜ್ಯ ಸರಕಾರದ ಆದೇಶಗಳನ್ನ ಉಲ್ಲಂಘನೆ ಮಾಡಲು ಸ್ಥಳೀಯ “ಗಟ್ಟಿಮುಟ್ಟ” ಶಾಸಕರ ಹೆಸರನ್ನೇ ಪತ್ರದಲ್ಲಿ ಬರೆದು “ಕ್ರಾಸ್ ಡೆಪ್ಟೇಟೇಷನ್” ಮಾಡುತ್ತಿದ್ದಾರೆ. ಅದೇ ಕಾಂಗ್ರೆಸ್ ಪಕ್ಷದ “ಸೌಮ್ಯ ಸ್ವಭಾವದ” ಶಾಸಕರ ಪತ್ರಗಳನ್ನ ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಈ ಮೂಲಕ ಶಿಕ್ಷಕ ವಲಯದಲ್ಲಿ ತಾವು ಗಟ್ಟಿಮುಟ್ಟ ಶಾಸಕರ ಬಳಿ ಹೋಗಬೇಕು ಎನ್ನೋ ಮನೋಭಾವನೆ ಹುಟ್ಟಿಸುವ ಯತ್ನ ನಡೆದಿದೆ ಎಂಬುದು ಹಬ್ಬಿರುವ ಮಾತುಗಳು.
ಓರ್ವ ಮಹಿಳಾ ಶಿಕ್ಷಕಿ ತನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ಶಿಫಾರಸ್ಸು ಪತ್ರ ತೆಗೆದುಕೊಂಡು ಹೋದರೂ, ಡೆಪ್ಟೇಟೇಷನ್ ಮಾಡದ ಡಿಡಿಪಿಐ ಅವರು, ವರ್ಗಾವಣೆ ಮಾಡುವಾಗ ಸ್ಥಳವೇ ಇಲ್ಲದ ಶಾಲೆಗಳಿಗೆ ಇಬ್ಬರು ಶಿಕ್ಷಕರನ್ನ “ಕ್ರಾಸ್ ಡೆಪ್ಟೇಟೇಷನ್” ಮಾಡಿದ್ದು, ಅದಕ್ಕೆ ಸ್ಥಳೀಯ ಶಾಸಕರ ಶಿಫಾರಸ್ಸು ಕಾರಣ ಎಂಬುದನ್ನು ಸ್ಪಷ್ಟವಾಗಿ ಆದೇಶದಲ್ಲಿ ನಮೂದು ಮಾಡಿದ್ದಾರೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರಿಗೆ ಗೊತ್ತಿಲ್ಲದೇ ಇದು ನಡೆಯುತ್ತಿದ್ದು, ಶಿಕ್ಷಣ ಇಲಾಖೆಯ ಸ್ಥಿತಿ ಅಧೋಗತಿಯತ್ತ ಸಾಗುತ್ತಿದೆ. ಅಷ್ಟೇ ಅಲ್ಲ, ಡಿಡಿಪಿಐ ಕಚೇರಿಯಲ್ಲಿ ನಡೆದಿರುವ ಮತ್ತಷ್ಟು ಕ್ರಾಸ್ ಡೆಪ್ಟೇಟೇಷನ್ ಲಿಸ್ಟ್, ನಾಳೆ ಕರ್ನಾಟಕವಾಯ್ಸ್. ಕಾಂ ಹೊರ ಹಾಕಲಿದೆ.