ಧಾರವಾಡ: ಇನ್ನೂ ನಡೆಯದ ಶಿಕ್ಷಕರ ಬಡ್ತಿ ಪ್ರಕ್ರಿಯೆ: ಡಿಡಿಪಿಐಯಿಂದ ಸರಕಾರದ ಆದೇಶ ಉಲ್ಲಂಘನೆ
ಧಾರವಾಡ: ಜಿಲ್ಲೆಯಲ್ಲಿ ಇನ್ನೂ ಸಹಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಪ್ರಕ್ರಿಯೆಗೆ ಇನ್ನೂ ದಿನಾಂಕ ನಿಗದಿಯಾಗದಿರುವುದು ಸೋಜಿಗವಾಗಿದ್ದು, ಡಿಡಿಪಿಐಯವರು ಸರಕಾರದ ಆದೇಶವನ್ನ ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಒಂದೇ ತಿಂಗಳಲ್ಲಿ ಎರಡೆರಡು ಬಾರಿ ವಲಯವಾರು ವರ್ಗಾವಣೆ ನಡೆದು ಮುಗಿದು ನಾಲ್ಕು ದಿನಗಳಾದರೂ ಇನ್ನೂ ಸಹಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಪ್ರಕ್ರಿಯೆ ದಿನಾಂಕ ನಿಗದಿಯಾಗಿಲ್ಲ.
ಧಾರವಾಡದಲ್ಲಿ ಸಾಕಷ್ಟು ಶಿಕ್ಷಕರ ಸಂಘಟನೆಗಳಿದ್ದರೂ ಕೂಡಾ ಇಲ್ಲಿಯವರೆಗೆ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಆಂಗ್ಲ, ಉರ್ದು ಮತ್ತು ಹಿಂದಿ ಶಿಕ್ಷಕರ ಬಡ್ತಿ ಪ್ರಕ್ರಿಯೆ ನಡೆದಿಲ್ಲ.
AM TO HM ಬಡ್ತಿ ಕೂಡಾ ನಡೆದಿಲ್ಲ. 2-09-2020ರಂದು ನಡೆದ ಬಡ್ತಿ ಪ್ರಕ್ರಿಯೆಯ ಬಗ್ಗೆಯೂ ಇಲ್ಲಿಯವರೆಗೆ ಸ್ಪಷ್ಟೀಕರಣವಾಗಿಲ್ಲ. ಇಲಾಖೆಯಿಂದಲೇ 16-09-2020ರವರೆಗೆ ಅವಕಾಶ ನೀಡಿದ್ದರೂ ಮುಗಿದಿಲ್ಲ. ಹಲವು ಜಿಲ್ಲೆಗಳಲ್ಲಿ ಇಂದು ಕೌನ್ಸಲಿಂಗ್ ಇಟ್ಟುಕೊಂಡಿದ್ದು ಧಾರವಾಡದಲ್ಲಿ ಯಾವಾಗ ಅಂತಾ ತಿಳಿದಿಲ್ಲ. ಧಾರವಾಡದ ಡಿಡಿಪಿಐ ಮೋಹನಕುಮಾರ ಹಂಚಾಟೆ ಸರಕಾರದ ಆದೇಶವನ್ನ ಪಾಲನೆ ಮಾಡದೇ ಇರುವುದು ಕಂಡು ಬಂದಿದೆ. ಇದರ ಹಿಂದೆ ಏನು ನಡೆಯುತ್ತಿದೆ ಎಂಬ ಸಂಶಯವೂ ಮೂಡತೊಡಗಿದೆ.
ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಆಂಗ್ಲ, ಹಿಂದಿ ಮತ್ತು ಉರ್ದು ವಿಷಯಗಳ ಬಡ್ತಿ ಮತ್ತು ಪ್ರಾಥಮಿಕ ಶಾಲೆ AM TO HM ಬಡ್ತಿಯನ್ನು ನಿಗದಿಗೊಳಿಸಲು ಧಾರವಾಡ ಜಿಲ್ಲೆಯ ಶಿಕ್ಷಕರು ಕೂಡಾ ಕೋರಿದ್ದಾರೆ.