ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿ ಹೆಣ್ಣು ಮಕ್ಕಳಿಗೂ ಆದರ್ಶ: ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಅಭಿಮತ
1 min readಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ, ಸ್ವಾಭಿಮಾನಿ ರಾಣಿ ಚನ್ನಮ್ಮ ಆದರ್ಶ ಪ್ರಾಯಳು; ಚೆನ್ನಮ್ಮಳ ಜೀವನ ಮತ್ತು ಸಾಧನೆ ಪ್ರೇರಕ ಶಕ್ತಿಯಾಗಿದೆ:ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ
ಧಾರವಾಡ: ದೇಶದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಇಂದಿನ ಮಹಿಳೆಯರಿಗೆ ಆದರ್ಶ ಪ್ರಾಯರಾಗಿದ್ದಾರೆ. ಅವರ ಹೋರಾಟ, ಧೈರ್ಯ, ಸ್ಥೈರ್ಯ ಮತ್ತು ಸ್ವಾಭಿಮಾನಗಳು ಪ್ರತಿಯೊಬ್ಬ ಮಹಿಳೆಯಲ್ಲಿ ಇರಬೇಕು. ನಮ್ಮ ಹೆಣ್ಣುಮಕ್ಕಳಿಗೆ ರಾಣಿ ಚನ್ನಮ್ಮನ ಗುಣಗಳನ್ನು ಬೆಳೆಸಬೇಕು. ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ, ಸ್ವಾಭಿಮಾನಿ ಕಿತ್ತೂರು ರಾಣಿ ಚನ್ನಮ್ಮ ಆದರ್ಶ ಪ್ರಾಯಳಾಗಿದ್ದು, ಅವರ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಪ್ರೇರಕ ಶಕ್ತಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.
ಅವರು ಇಂದು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಿತ್ತೂರಿನ ರಾಣಿ ಚನ್ನಮ್ಮನ ಬಗ್ಗೆ ಅನೇಕ ರೀತಿಯ ಜನಪದ ಕಥೆಗಳು, ಜನಪದ ಗೀತೆಗಳು, ಗೀಗಿ ಪದಗಳು ಸ್ವಾರಸ್ಯಕರವಾಗಿರುವ ಮತ್ತು ಐತಿಹಾಸಿಕವಾಗಿರುವ ಕಥೆಗಳನ್ನು ತಿಳಿಸುತ್ತವೆ. ಚಿಕ್ಕಂದಿನಿಂದಲೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದ ಚೆನ್ನಮ್ಮಳು, ಕಿತ್ತೂರಿನ ದೇಸಾಯಿ ಮನೆತನದ ರಾಜಾ ಮಲ್ಲಸರ್ಜನನ್ನು 15 ನೇ ವಯಸ್ಸಿನಲ್ಲಿ ವಿವಾಹವಾದರು. ಮಲ್ಲಸರ್ಜನ ನಿಧನಾ ನಂತರ ಕಿತ್ತೂರು ಸಂಸ್ಥಾನದ ಆಡಳಿತ ಚುಕ್ಕಾಣಿ ಹಿಡಿದ ಚನ್ನಮ್ಮಳು ಸ್ವಾಭಿಮಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಇತಿಹಾಸ ಸೃಷ್ಟಿಸಿದಳು, ಕಿತ್ತೂರಿನ ವಿಜಯೋತ್ಸವಕ್ಕೆ ಎರಡು ನೂರು ವರ್ಷಗಳು ತುಂಬಿರುವ ಪ್ರಯುಕ್ತ, ರಾಣಿ ಚನ್ನಮ್ಮಳ ಸಂಸ್ಮರಣೆ ಮತ್ತು ಕಿತ್ತೂರಿನ ಇತಿಹಾಸವನ್ನು ನಾಡಿನೂದ್ದಕ್ಕೂ ಪ್ರಸರಿಸಿ, ಕೀರ್ತಿ ಹರಡಲು ರಾಜ್ಯ ಸರ್ಕಾರವು ಕಿತ್ತೂರು ವಿಜಯೋತ್ಸವದ ಜ್ಯೋತಿ ರಥ ಯಾತ್ರೆಯನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಜ್ಯೋತಿ ರಥ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿ, ಬಿಳ್ಕೋಡಲಾಗಿದೆ ಎಂದು ಅವರು ಹೇಳಿದರು.
ಕಿತ್ತೂರಿನ ರಾಣಿ ಚನ್ನಮ್ಮಳ ಜೀವನ ಚರಿತ್ರೆಯನ್ನು ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಅಳವಡಿಸಿ, ವಿದ್ಯಾರ್ಥಿಗಳಲ್ಲಿ ನಾಡಿನ ನಾಯಕರ ತ್ಯಾಗ, ಬಲಿದಾನ, ಸಾಧನೆಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮತ್ತು ಚಿಂತಕ ಮಡಿವಾಳಪ್ಪ ಶಿರಿಯಣ್ಣವರ ಅವರು ಕಿತ್ತೂರು ರಾಣಿ ಚನ್ನಮ್ಮ ಅವರ ಜೀವನ ಮತ್ತು ಸಾಧನೆ ಬಗ್ಗೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೇರಿ ಸ್ವಾಗತಿಸಿ, ಆರತಿ ದೇವಶಿಕಾಮಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಮಹಾನಗರ ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ, ಹಿರಿಯರಾದ ಸಿ.ಎಸ್. ಪಾಟೀಲ, ಸಿ.ಎಸ್. ನೇಗಿನಾಳ, ರಾಜು ಮಟ್ಟಿ, ಎನ್.ಆರ್.ಬಾಳಿಕಾಯಿ, ಗಾಮನಗಟ್ಟಿ ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.