ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಇರದೇ ಇದ್ದರೆ ನಮ್ಮ ಕುಟುಂಬವೇ ನಾಶವಾಗುತ್ತಿತ್ತು: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿವೇಕಾನಂದ ದೊಡ್ಡಮನಿ…
ಹುಬ್ಬಳ್ಳಿ: ಮರ್ಯಾದಾ ಹತ್ಯೆ ಪ್ರಕರಣವೊಂದು ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ ಮೃತಪಟ್ಟ ಮಾನ್ಯ ಪಾಟೀಲಳ ಪತಿ ವಿವೇಕಾನಂದ ದೊಡ್ಡಮನಿ ಅವರು ಪೊಲೀಸ್ ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣನವರ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದು, “ಅವರು ಇರದೇ ಇದ್ದರೆ ನಮ್ಮ ಇಡೀ ಕುಟುಂಬವೇ ಸರ್ವನಾಶವಾಗುತ್ತಿತ್ತು” ಎಂದು ಹೇಳಿಕೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ: ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಾನ್ಯ ಪಾಟೀಲ್, ತನ್ನ ಕುಟುಂಬದವರಿಂದಲೇ ಪ್ರಾಣದ ಭೀತಿ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ದಂಪತಿಗಳು ರಕ್ಷಣೆ ಕೋರಿದ್ದರು. ಈ ವೇಳೆ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣನವರ, ಪ್ರಕರಣದ ಗಂಭೀರತೆಯನ್ನು ಅರಿತು ತಕ್ಷಣವೇ ರಕ್ಷಣೆಗೆ ಧಾವಿಸಿದ್ದರು.
ವಿವೇಕಾನಂದ ದೊಡ್ಡಮನಿ ಅವರ ಹೇಳಿಕೆ:
ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿವೇಕಾನಂದ, “ನಮ್ಮ ಪ್ರೀತಿಯ ಮದುವೆ ಮಾನ್ಯಳ ಮನೆಯವರಿಗೆ ಇಷ್ಟವಿರಲಿಲ್ಲ. ಅವರು ನಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಮುರಗೇಶ ಅವರು ದೇವದೂತನಂತೆ ಬಂದು ನಮಗೆ ರಕ್ಷಣೆ ನೀಡಿದರು. ಅವರ ಸಮಯಪ್ರಜ್ಞೆ ಮತ್ತು ಧೈರ್ಯ ಇಲ್ಲದಿದ್ದರೆ, ಕೇವಲ ಮಾನ್ಯ ಮಾತ್ರವಲ್ಲ, ನಮ್ಮ ಇಡೀ ಕುಟುಂಬವನ್ನೇ ಅವರು ಕೊಂದು ಹಾಕುತ್ತಿದ್ದರು,” ಎಂದು ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
