ಚಾಮರಾಜನಗರ: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಕೊರೋನಾದಿಂದಾಗಿ ಪ್ರತಿನಿತ್ಯ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ. ಕೊರೋನ ಸೋಂಕಿನ ಭಯದಿಂದಾಗಿ ಮೃತಪಟ್ಟ ವ್ಯಕ್ತಿಯ ಮನೆಯವರೇ ಮೃತದೇಹದ ಅಂತ್ಯಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಚಾಮರಾಜನಗರದ ಹಳ್ಳಿಯೊಂದರಲ್ಲಿ ಮುಸ್ಲಿಂ ಯುವಕರ ಮಾನವೀಯ ಕಾರ್ಯ ಜನರಿಂದ ಮೆಚ್ಚುಗೆ ಗಳಿಸಿದೆ. ಕೊರೋನಾ ಮೃತಪಟ್ಟ ವ್ಯಕ್ತಿಯ ಶವವನ್ನು ಬೈಕಿನಲ್ಲಿ ಸಾಗಿಸಿ ಅಂತ್ಯಕ್ರಿಯೆ ಮಾಡುವ ಮೂಲಕ ಪಿಎಫ್‍ಐ ಸಂಘಟನೆ ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಆಲದಹಳ್ಳಿಯಲ್ಲಿ ಮೃತಪಟ್ಟಿದ್ದ ಮಾದೇವ (65) ಶವವನ್ನು ಬೈಕಿನಲ್ಲಿ ಸಾಗಿಸಿ ಪಿಎಫ್‍ಐ ಕಾರ್ಯಕರ್ತರು ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿದ್ದಾರೆ. ಹೆಂಡತಿ, ಮಕ್ಕಳಿಲ್ಲದ ಮಾದೇವ ಭಾನುವಾರ ಮನೆಯಲ್ಲಿ ಮೃತಪಟ್ಟಿದ್ದಾರೆ. ಕೊರೊನಾದಿಂದ ಮೃತಪಟ್ಟಿರಬಹುದು ಎಂದು ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು ಭಯಭೀತರಾಗಿದ್ದರು. ನಂತರ ಪಿಎಫ್‍ಐ ಸಂಘಟನೆಗೆ ಕರೆ ಮಾಡಿದಾಗ, ಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರು ಶವಸಂಸ್ಕಾರಕ್ಕೆ ಗ್ರಾಮಸ್ಥರ ನೆರವು ಕೋರಿದರು.
ಕೋವಿಡ್ ಭಯದಿಂದಾಗಿ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಯಾರೂ ಮುಂದೆ ಬರಲಿಲ್ಲ. ವಾಹನ ಕೂಡ ನೀಡಲಿಲ್ಲ. ತಾಲೂಕು ಆಡಳಿತದ ಸಹಾಯವೂ ಸಿಗಲಿಲ್ಲ. ಕೊನೆಗೆ ಪಿಎಫ್‍ಐ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಶವವನ್ನು ಸಾಗಿಸಿದ್ದಾರೆ. ಈ ವೇಳೆ ಗ್ರಾಮಾಂತರ ಠಾಣೆ ಪೊಲೀಸರು ಶವ ಹೂಳಲು ಗೋಮಾಳದಲ್ಲಿ ಜಾಗ ತೋರಿಸಿದ್ದಾರೆ. ನಂತರ ಸಂಘಟನೆಯವರು ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಒಟ್ಟಿನಲ್ಲಿ ಪಿಎಫ್‍ಐ ಕಾರ್ಯಕರ್ತರ ಈ ಕಾರ್ಯಕ್ಕೆ ನಾವೆಲ್ಲರೂ ಹ್ಯಾಟ್ಸಾಫ್ ಹೇಳಲೇಬೇಕು.