ಸಂಘಟನೆಯ ಹೆಸರಿನಲ್ಲಿ ಶಾಲೆಗಳಿಗೆ ಶಿಕ್ಷಕರ ಗೈರು- ಆಯುಕ್ತ ಅನ್ಬುಕುಮಾರ ಡಿಡಿಪಿಐಗೆ ತರಾಟೆ

ಕೋಲಾರ: ಜಿಲ್ಲೆಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಾಲೆಗೆ ಹೋಗದೆ ಸುತ್ತಾಡುತ್ತಿದ್ದಾರೆ. ವಿನಾಕಾರಣ ಒಒಡಿ, ನಿಯೋಜನೆ ಮೇರೆಗೆ ಸ್ಥಳ ಬದಲಾಯಿಸಿಕೊಂಡು ಶಾಲೆಗೆ ಗೈರು ಆಗುತ್ತಿದ್ದಾರೆ. ಸಂಘಟನೆಯ ಹೆಸರಿನಲ್ಲಿ ಅಧಿಕಾರಿಗಳನ್ನು ಹೆದರಿಸುತ್ತಾ ಶಾಲೆಗಳಿಗೆ ಹೋಗುತ್ತಿಲ್ಲ. ಶಾಲೆಗೆ ಹೋಗದೆ ಪಾಠ ಮಾಡದ ಶಿಕ್ಷಕರ ನಿಯೋಜನೆ ರದ್ದು ಮಾಡಬೇಕು. ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿಗತಿಯ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿಯವರನ್ನು, ರಾಜ್ಯ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಸ್ಸೆಸ್ಸೆಲ್ಸಿ-2020ರ ಫಲಿತಾಂಶ ಸುಧಾರಣೆ ಹಾಗೂ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು, ತೀವ್ರ ತರಾಟೆಗೆ ತೆಗೆದುಕೊಂಡರು.
ಕುರಿತು ತಾಲ್ಲೂಕುವಾರು ಬಿ.ಇ.ಓ ಅವರಿಂದ ಮಾಹಿತಿ ಪಡೆದರು. ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಪಿಪಿಟಿ ಪ್ರದರ್ಶನ ನೀಡುವಂತೆ ಡಿಡಿಪಿಐ ಅವರಿಗೆ ಸೂಚಿಸಿದರು. ಆಗ ಬುಕ್ ಲೇಟ್ ಕೊಡಲು ಮುಂದಾದಾಗ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಪಿಪಿಟಿ ಪ್ರದರ್ಶನ ನೀಡಲು ಹೇಳಿದ್ದೆ. ಆದರೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ. ನಿವೇನು ಕಚೇರಿ ಕೆಲಸ ಮಾಡ್ತಿರ, ಇಲ್ಲ ಬೇರೆ ಏನಾದರು ಮಾಡ್ತಿದೀರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಪಠ್ಯ ಪುಸ್ತಕ ಸರಬರಾಜಿನಲ್ಲಿ ನಡೆದಿರುವ ಹಗರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ತನಿಖೆ ಮುಗಿಯುವ ತನಕ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.
ಸರ್ಕಾರಿ ಶಾಲೆಗಳ ಬಗ್ಗೆ ಉದಾಸೀನ ಬೇಡ. ವೃತ್ತಿಯಲ್ಲಿ ಸಾಧನೆ ಮಾಡುವ ಇಚ್ಚಾಶಕ್ತಿ ಜೂತೆಗೆ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಸರ್ಕಾರದಿಂದ ದೊರೆಯುವಂತ ಅವಕಾಶಗಳನ್ನು ಸದ್ಬಳಿಸಿಕೊಂಡು ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಗೆ ಪೂರಕವಾಗುವಂತೆ ಶಾಲೆಗಳಲ್ಲಿ ವಾತಾವರಣ ಸೃಷ್ಟಿಸಬೇಕು. ಇದಕ್ಕೆ ಬಿಆರ್‍ಪಿ, ಸಿಆರ್‍ಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರತಿ ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ, ಅಡುಗೆ ಮನೆ, ಶಾಲಾ ಕಾಪೌಂಡ್, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನಗಳು, ಪೀಠೋಪಕರಣ ಸೇರಿದಂತೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದಾಗ ಮಾತ್ರ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಬಿ.ಇ.ಓ.ಗಳು ಕಚೇರಿಯಲ್ಲಿ ಕಾಲಹರಣ ಮಾಡುವ ಬದಲೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸ ಬೇಕು. ಮೂಲಭೂತ ಸೌಲಭ್ಯಗಳ ಜೂತೆಗೆ ಶಿಕ್ಷಕರ ಪಠ್ಯಕ್ರಮಗಳ ಸಾಧನೆಯನ್ನು ಪರಿಶೀಲಿಸ ಬೇಕು. ಅಗತ್ಯವಾದ ತರಬೇತಿ ನೀಡುವ ಜೂತೆಗೆ ಸಂಶೋದನೆ ಹಾಗೂ ವಿನೂತನ ಆವಿಷ್ಕಾರಗಳಿಗೆ ಪ್ರೇರಿಪಿಸುವಂತಾಗಬೇಕು ಎಂದು ತಿಳಿಸಿದರು.
ಶಾಲೆಗಳ ಮೂಲಭೂತಸೌಲಭ್ಯಗಳ ಜೂತೆಗೆ ಫಲಿತಾಂಶಗಳನ್ನು ಗಮನಿಸಿ ಎ.ಬಿ.ಸಿ.ಡಿ. ಮಾದರಿಯಲ್ಲಿ ವಿಂಗಡಿಸ ಬೇಕು.ಮೂಲಭೂತ ಸೌಲಭ್ಯಗಳಿಗೆ ಅಂಕಗಳನ್ನು ನಿಗಧಿ ಪಡೆಸಿ ಸ್ಥಾನಗಳನ್ನು ಗುರುತಿಸಬೇಕು. ಪರೀಕ್ಷೆಯಲ್ಲಿ ಫಲಿತಾಂಶವು ಕಡಿಮೆ ಇದ್ದರೆ ಅದಕ್ಕೆ ಕಾರಣವೇನು, ಇಲಾಖೆಯಿಂದ ಇರುವ ಕೊರತೆಯ ಬಗ್ಗೆ ಪರಿಶೀಲಿಸ ಬೇಕು. ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆಯಲು ಭೋದನಾ ಕ್ರಮದಲ್ಲಿ ಲೋಪಗಳಿದ್ದರೆ ಶಿಕ್ಷಕರಿಗೆ ಅಗತ್ಯವಾದ ತರಬೇತಿ ನೀಡಬೇಕು ಎಂದು ಹೇಳಿದರು.
ಪ್ರತಿ ಶಾಲೆಯು ಎ ಮತ್ತು ಬಿ ಸ್ಥಾನದಲ್ಲಿಯೇ ಇರುವಂತೆ ಅಧ್ಯಯನ ಮಾಡಿ ಗುಣಮಟ್ಟವನ್ನು ಕಾಪಾಡಿ ಕೊಳ್ಳಬೇಕು. ಶಿಕ್ಷಣ ಇಲಾಖೆಗೆ ದೊರೆಯುವಷ್ಟು ಸೌಲಭ್ಯಗಳು ಯಾವ ಇಲಾಖೆಗೂ ಇಲ್ಲ. ಉದಾಹರಣೆಗೆ ನರೇಗಾದಲ್ಲಿ ಶಾಲಾ ಕಾಪೌಂಡ್ ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.
ಶಾಲೆಗಳಿಗೆ ಅಗತ್ಯತೆಗಳ ಬಗ್ಗೆ ಕ್ರಿಯಯೋಜನೆಗಳನ್ನು ರೂಪಿಸಿ ಸಂಬಂಧ ಪಟ್ಟ ಪಂಚಾಯಿತಿ ಮೂಲಕ ಸರ್ಕಾರದ ಗಮನಕ್ಕೆ ತಂದು ಸಿಎಸಾರ್ , ಡಿ.ಎಂ.ಎಫ್ ಇತ್ಯಾದಿ ಅನುದಾನಗಳನ್ನು ಮಂಜೂರು ಮಾಡಿಕೊಳ್ಳಲು ಯಾವೂದೇ ಅಡ್ಡಿ ಇರದು. ಇದನ್ನು ಸದ್ಬಳಿಸಿ ಕೊಳ್ಳುವ ಇಚ್ಚಾ ಶಕ್ತಿ ಬೇಕು. ಇದು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿನ ಕೊರತೆಗಳನ್ನು ಪಟ್ಟಿ ಮಾಡಿ ಒಂದೇ ಭಾರಿ ಮಂಜೂರು ಮಾಡಿಸಿ ಕೊಂಡರೆ ಅನುವುಂಟಾಗುವುದು, ರಾಜ್ಯ ಮಟ್ಟದಲ್ಲಿ 17 ಶಾಲೆಗೆ ಒಂದೇ ಬಾರಿ ಕುಡಿಯವ ನೀರಿನ ಸೌಲಭ್ಯದ ಕ್ರಿಯಾ ಯೋಜನೆ ಮಂಜೂರು ಮಾಡಿದ್ದನ್ನು ಉದಾಹರಿಸಿದ ಅವರು ಸಿ ಮತ್ತು ಡಿ ಸ್ಥಾನದಲ್ಲಿ ಇರುವ ಶಾಲೆಗಳನ್ನು ಎ. ಮತ್ತು ಬಿ ಮಟ್ಟಕ್ಕೆ ತರುವಂತೆ ಶ್ರಮವಹಿಸ ಬೇಕೆಂದು ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1550 ಶಾಲೆಗಳಿದ್ದು, ಆ ಪೈಕಿ ಎ ವರ್ಗದಲ್ಲಿ 1,236,ಬಿ ವರ್ಗದಲ್ಲಿ 676 ಹಾಗೂ ಉಳಿದವರು ಸಿ, ಡಿ ವರ್ಗದಲ್ಲಿವೆ. ಶಾಲೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಕ್ರಿಯಾ ಯೋಜನೆ ತಯಾರಿಸಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಬಿಇಓಗಳು ದತ್ತು ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಾದರಿ ಶಾಲೆಯನ್ನಾಗಿ ಪರಿವರ್ತಿಸಬೇಕು. ಇವುಗಳಿಗೆ ವಿಶೇಷವಾದ ಅನುದಾನಗಳಿರುವುದನ್ನು ಸದ್ಬಳಿಸಿ ಕೊಂಡು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರ ತರುವಂತಾಗಬೇಕು. ಇವುಗಳ ಉಸ್ತುವಾರಿ ಸರಿಯಾಗಿ ನಿರ್ವಹಿಸಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಮುಳಬಾಗಿಲು ತಾಲ್ಲೂಕಿನ ಮಲ್ಪನಹಳ್ಳಿ, ತಾಯಲೂರು. ವರದೇನಹಳ್ಳಿ ಸೇರಿದಂತೆ ಮೂರು ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯು ಕಂಡು ಬಂದಿದ್ದು ದಾನಿಗಳ ಮೂಲಕ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿರುವುದಾಗಿ ಕ್ಷೇತ್ರದ ಬಿ.ಇ.ಓ. ತಿಳಿಸಿದರು.
ಶಾಲೆಗಳಲ್ಲಿನ ಶೌಲಭ್ಯಗಳ ಕೊರತೆ ಬಗ್ಗೆ ಸಂಬಂಧ ಪಟ್ಟ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಿ.ಇ.ಓ. ಅವರ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳ ಬೇಕೆಂದು ಸಲಹೆ ನೀಡಿದರು.