Posts Slider

Karnataka Voice

Latest Kannada News

ಮಕ್ಕಳ ಇಂದಿನ ಮನಃಸ್ಥಿತಿಗೆ “ಯಾರು ಕಾರಣ”- DCP ರವೀ ಚಿಕ್ಕನಾಯಕಹಳ್ಳಿ ಅದ್ಭುತ ಅಭಿಪ್ರಾಯ…

1 min read
Spread the love

ಯಾರು ಕಾರಣ… ?

ಯಾರು ಕಾರಣ ಎಂದರೆ ಅದು ಗೊತ್ತಿಲ್ಲ ! ಒಬ್ಬ ನೇಣಿಗೆ ಶರಣಾದರೆ, ಮತ್ತೊಬ್ಬ ಬ್ಲೇಡ್ ನಿಂದ ರಕ್ತನಾಳ ಕೊಯ್ದುಕೊಂಡರೆ, ಮಗದೊಬ್ಬ ವಿಷ ಸೇವಿಸಿದ್ದರೆ, ಮತ್ತೊಬ್ಬ ಹೆತ್ತವರ ಆಸೆ ಆಕಾಂಕ್ಷೆಗಳಿಗೆ ತಿಲಾಂಜಲಿ ಇಟ್ಟು ತಾನು ಸ್ವರ್ಗವಾಸಿಯಾಗಿದ್ದ ! ಹೌದು ಈ ವಿಪ್ಲವಗಳಿಗೆ ಅರ್ಥವೇನಾದರೂ ಉಂಟೆ ? ಎಂದು ಸೂಕ್ಷ್ಮವಾಗಿ ಗಮನಿಸಿದರೆ ಯಾವೊಂದು ಹೃದಯಾರ್ಪಿತಕ್ಕೆ ಕಾರಣವೇ ಇಲ್ಲ, ಎಲ್ಲವೂ ಬೋಳು ಬೋಳು, ಎಲ್ಲವೂ ನಿರುತ್ತರ, ಹೆತ್ತ ತಂದೆ ತಾಯಿಗಳಿಂದಿಡಿದು ಮುದ್ದು ಮಾಡಿದ ಭಾಂಧವರಿಂದ ಬಂದಂತಹ ಉತ್ತರ ಎಂದರೆ *ಗೊತ್ತಿಲ್ಲ* ಎಂಬುದೇ ಆಗಿದೆ.

ಸ್ವಲ್ಪ 1980 ರಿಂದ 2000 ದ ಆಸುಪಾಸಿಗೆ ನಾವು ಸಾಗೋಣ, ಅಂದು ಅಪ್ಪನಾಗಲಿ, ಅಮ್ಮನಾಗಲಿ ಮಕ್ಕಳಿಗೆ ವಾಸ್ತವಿಕ ಜಗತ್ತನ್ನು ಪರಿಚಯಿಸುತ್ತಿದ್ದರು. ನನ್ನ ಮಡಿಲಲ್ಲಿ ಹುಟ್ಟಿದ ಈ ಕಂದ ಜೀವನದಲ್ಲಿ ಯಾವುದೇ ಕಾರಣಕ್ಕೂ ಸೋಲಲೇಬಾರದು ಎಂದು ಎಲ್ಲಾ ಕ್ಷೇತ್ರಗಳಲ್ಲೂ ಜ್ಞಾನದ ದೀವಿಗೆಯನ್ನು ಅವರ‌ಮಕ್ಕಳಲ್ಲಿ ಬೆಳೆಸುತ್ತಿದ್ದರು. ಅಂದಿನ ಕಾಲದ ಅಪ್ಪ ಅಮ್ಮಂದಿರು *ನಾವು ಕಷ್ಟ ಬಿದ್ದು ಬದುಕನ್ನು ಕಟ್ಟಿಕೊಂಡಿರುವ ರೀತಿಯಲ್ಲಿಯೇ ನಮ್ಮ‌ ಉದರದಲ್ಲಿ ಜನಿಸಿದವರೂ ಸಹ ಅವರ ಬದುಕನ್ನು ಕಟ್ಟಿಕೊಳ್ಳಲಿ ಎಂದು ಮನದಲ್ಲಿ ಧೃಢ ನಿಶ್ಚಯದೊಂದಿಗೆ ಈ ಜಗತ್ತನ್ನು ತಮ್ಮ ಮಕ್ಕಳಿಗೆ ಪರಿಚಯಿಸುತ್ತಲಿದ್ದರು. ಆದರೆ, ಇಂದಿನ ತಂದೆ ತಾಯಿಗಳು *ನಾವು ಕಷ್ಟ ಬಿದ್ದಿದ್ದೇವೆ, ನಮ್ಮ ಮಕ್ಕಳು ನಮ್ಮ ಕಷ್ಟ ಬೀಳುವುದು ಬೇಡ ಎಂಬುವರು ಮನಸ್ಥಿತಿಯೇ ಇಂದಿನ ಮಕ್ಕಳ ಮಾನಸಿಕ ದಾರಿದ್ರ್ಯಕ್ಕೆ ನಂದಿಯಾಯಿತೇನೋ ಎನ್ನುವ ಭಾವ ನನ್ನದಾಗಿದೆ. ಇದು ಕಹಿ ಎನಿಸಿದರೂ ಸತ್ಯ ಎನ್ನುವುದನ್ನು ಅವರವರ ಆತ್ಮಾವಲೋಕನೆ ಮಾಡಿಕೊಳ್ಳಲಿ.‌

ಅಂದು ನನ್ನ ಹಡೆದ ಅಮ್ಮ ಹಾಗೂ ಅಪ್ಪನಿಗೆ ಮಗನ ಮೇಲೆ ಪ್ರೀತಿ ಇತ್ತು, ನಾನು 9 ನೇ ತರಗತಿಯಲ್ಲಿ ದೇಶೀಯ ವಿದ್ಯಾಪೀಠ ಶಾಲೆ ಯಲ್ಲಿ ಓದುವಾಗಲೇ ಅಪ್ಪನಿಗೆ ಪಾರ್ಶ್ವವಾಯು ಇದ್ದಾಗಲೂ ಸಹ ತನ್ನ ಮಗನಿಗೆ ನೇಗಿಲ ಹೂಡಿಸಿ ಹೊಲವನದನು ಬೇಸಾಯ ಮಾಡಿಸಿ ಒಬ್ಬ ಶುದ್ದ ಕಾಯದ ರೈತಾಪಿತನ ಮೊಳಕೆ ಒಡೆವಂತೆ ಮಾಡಿದ್ದರು, ಶನಿವಾರ ಭಾನುವಾರ ಬಂತೆಂದರೆ ದನಗಳನ್ನು ಪೂರ್ದ ದಿಕ್ಕಿನ ಮದ್ದನಿಂಗನ ಕಣಿವೆಗೆ ದನ ಕಾಯುವ ಹುಡುಗನ್ನಾಗಿ ಮಾಡಿದರು, ಗುರುವಾರ ಬಂತೆಂದರೆ ಹುಳಿಯಾರು ಸಂತೆಯಲ್ಲಿ ನನ್ನ ಕೈ ನಿಂದ ಅಡಿಕೆ ವ್ಯಾಪಾರ ಮಾಡಿಸಿದ್ದರು. ಅಮ್ಮಳಂತೂ ಪ್ರತಿದಿನ ಸ್ನಾನ ಮಾಡಿ ಶುಭ್ರವನಿತೆಯಾಗಿ ಆಕೆ ರುದ್ರೇಶ್ವರ ದೇವಸ್ಥಾನಕ್ಕೆ ತೆರಳುವಾಗ ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಆಕೆ ಇರುವೆಗಳ ಗೂಡಿಗೆ ಅಕ್ಕಿ ನುಚ್ಚನ್ನು ಹಾಕುವಾಗ ನೋಡು ಮಗನೇ ನೀನೂ ಬದುಕು, ಇತರರನ್ನೂ ಬದುಕಿಸು ಎಂದು ಪ್ರತಿದಿನ ಪೂರ್ಣ ಪಾಠ ಮಾಡುತ್ತಿದ್ದಳು. ಇಲ್ಲಿಯ ಇಷ್ಟು ಸಾರಾಂಶ ಎಂದರೆ ಅಪ್ಪನು ಮಗ ಸೋಲಬಾರದೆಂದು ಈ ಜಗತ್ತನ್ನು ಪರಿಚಯಿಸಿದರೆ ಅಮ್ಮ ನನಗೆ ಮಾನವೀಯತೆ, ಮನುಷ್ಯತ್ವ, ಪ್ರೀತಿ, ಭಾತೃತ್ವವನ್ನು ಕಲಿಸಿದವಳಾಗಿದ್ದಳು. ನೋಡಿದರೆ ಅಪ್ಪ ಅಮ್ಮ ಇಬ್ಬರೂ ಹೆಬ್ಬೆಟ್ಟು ಗಿರಾಕಿಗಳು. ಆದರೆ ಅವರುಗಳ ನಡೆ ಯಾವ Phd ಮಾಡಿದವರಿಗೂ ಅಂದು ಕಡಿಮೆ ಎಂದು ನನಗನಿಸಲಿಲ್ಲ. ಕಾರಣ ಎಳೆಯವೆಯಿಂದ ನನಗೆ ನನ್ನ ಅಪ್ಪ ಅಪ್ಪ ಅಮ್ಮ ಕಲಿಸಿದ ಒಂದು, ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಎರಡು ಸ್ಥಳ ಎಂದರೆ ಒಂದು ಅಮ್ಮನ ಮಡಿಲು, ಮತ್ತೊಂದು ಅಪ್ಪನ ಹೆಗಲು ಹಾಗೂ ಅಮ್ಮನ ಮಡಿಲು ನನಗೆ ಈ ಜಗತ್ತಿಗೆ ನಾನು ಬರಲು ಅನುವು ಮಾಡಿಕೊಟ್ಟಿದ್ದರೆ ಪವಿತ್ರ ಅಪ್ಪನ ಹೆಗಲು ಈ ಜಗತ್ತನ್ನು ಪರಿಚಯಿಸಿರುವುದೇ ಆಗಿರುತ್ತದೆ. ಹಾಗಾಗಿ ಯಾವ ಪುಣ್ಯಕ್ಷೇತ್ರಗಳಿಗೂ, ಯಾವ ತೀರ್ಥಕ್ಷೇತ್ರಗಳಿಗಿಂತ ಶ್ರೇಷ್ಟ ಎಂದರೆ ಅದು ಅಮ್ಮನ ಮಡಿಲು ಹಾಗೂ ಅಪ್ಪನ ಹೆಗಲು.

ಇದು ಒತ್ತೋಟ್ಟಿಗಿರಲಿ, ಇಂದಿನ ಮಕ್ಕಳೇಕೆ ಆತ್ಮಾಹುತಿ ಮಾಡಿಕೊಳ್ಳಬೇಕು ? ಗೊತ್ತಿಲ್ಲ. ಒಂದು ಮಗು ಹುಟ್ಟಿದಾಗಲೇ ಆ ಮಗುವಿನ ತಂದೆತಾಯಿಯವರು ಆ ಮಗುವಿನ‌ ಕುಂಡೆಯ ಮೇಲೆ ಈ ಮಗು ಭವಿಷ್ಯದಲ್ಲಿ ಡಾಕ್ಟರೇ ಆಗಬೇಕು, ಇಂಜಿನಿಯರ್ರೇ ಆಗಬೇಕು ಎನ್ನುವ ಭ್ರಮೇಯೇ ಈ ಅವಘಢಗಳಿಗೆ ಕಾರಣ ಎನಿಸುತ್ತದೆ. ಹೆತ್ತ ತಂದೆತಾಯಿಗಳ ಮಕ್ಕಳ ಮೇಲೆ ಇಟ್ಟಿರುವಂತಹ ಅತಿಯಾದ ಕಲ್ಪನೆ ಹಾಗೂ ಭ್ರಮೆ. ಪಕ್ಕದ ಮನೆಯ ವಿಧ್ಯಾರ್ಥಿ ಒಂದು ಅಂಕ ಹೆಚ್ಚು ತಗೆದಿದ್ದರೆ ಈ ಮಗುವಿನ ತಂದೆ ತಾಯಿಯ ಚಡಪಡಿಯನ್ನು ಹೇಳತೀರದು. ನಮ್ಮ ಮಗು ಬುದ್ದಿವಂತನಲ್ಲ ಎಂಬ ಬ್ರ್ಯಾಂಡನ್ನು ತಮ್ನ ಹೆತ್ತ ಮಕ್ಕಳಿಗೆ ಸ್ವತಃ ತಾವೇ ನೀಡುತ್ತಾರೆ. ಇದನ್ನು ಪ್ರಶ್ನೆ ಮಾಡಿಕೊಂಡರೆ ತಮ್ಮಗಳ ಅಲ್ಪತನ ತಮಗೇ ಅರ್ಥವಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ನಿಗದಿ ಪಡಿಸಿರುವ ಅಂಕಗಳು ಕೇವಲ ಸೀಮಿತ ಜ್ಞಾನಕ್ಕೆ ಮಾತ್ರವೇ ಹೌದು, ಅದನ್ನು ಮೀರಿದ ಜ್ಞಾನದ ಹಸಿವು ಇಂದಿನ ಯುವ ಜನರಲ್ಲಿ ಕಾಣುವುದು ಸ್ವಲ್ಪ ದುಸ್ತರವೇ ಆಗಿದೆ. ಪ್ರಕೃತ ಪುಸ್ತಕದ ಜ್ಞಾನ ಮಸ್ಕಕಕ್ಕೆ ಹಾಗೇ ಹೊರೆ ಇಳಿಸಿದರೆ ಸಿಗುವುದು ಲೋಕಜ್ಞಾನದ 00000000.1 % ಮಾತ್ರವೇ ಎಂಬುದು ಸತ್ಯ. ಇಂದಿನ ಮಕ್ಕಳು ಪೋಷಕರ ಒತ್ತಡಕ್ಕೆ ಒಳಗಾಗಿ ಇಂದು ಪುಸ್ತಕದ ಹುಳುವಾಗಿ ಲೋಕಜ್ಞಾನವನ್ನು ತಿರಸ್ಕರಿಸಿ ಹೆಚ್ಚಿನವರು ಫಸ್ಟ್ ರ‌್ಯಾಂಕ್ ರಾಜುವೇ ಆಗಿದ್ದಾರೆ ಎಂದರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ.

ಹೆತ್ತವರ ನಿರೀಕ್ಷೆಗಳು ವೈಪರೀತ್ಯವೆನಿಸಿ ಆ ನಿರೀಕ್ಷೆಗಳು ಯಾವುದೇ ಎಳೆಯವರಿಗೆ ನಿಲುಕದೇ ಇದ್ದಾಗ, ಲೋಕಜ್ಞಾನದ ಅರಿವು ಇಲ್ಲದೇ ಹೋದಾಗ, ಕುದುರೆಗೆ ಕಟ್ಟಿದ ಜೀನಿನಂತೆ ಮನವನ್ನು ಹದಗೊಳಿಸಿಕೊಂಡ ಎಳೆಯ ಮನಸ್ಸುಗಳಿಗೆ ಆತ್ಮಹತ್ಯೆಯಲ್ಲದೆ ಮತ್ಯಾವ ದಾರಿಯೂ ಕಾಣುವುದಿಲ್ಲ. ಇದಕ್ಕೆಲ್ಲ ಕಾರಣ ಹಿರಿಯರು ಹೇರುವ ಒತ್ತಡ, ಹಿರಿಯರು ಇತರರಿಗೆ ಹೋಲಿಸಿ ಅಸಹ್ಯವಾಗಿ ಹೀಯಾಳಿಸುವ ಗುಣಗಳಲ್ಲದೇ ಮತ್ತೇನೂ ಅಲ್ಕವೇ ಅಲ್ಲ ಎಂಬುದು ನನ್ನ ನಿಲುವು. ಥಾಮಸ್ ಆಲ್ವಾ ಎಡಿಸನ್ ಅವರು ಎಲ್ಲರಿಂದಲೂ, ಅವನಿಗೆ ಶಿಕ್ಷಣ ಕಲಿಸಿದ ಗುರುಗಳಿಂದ ದೂರೀಕರಿಸಲ್ಪಟ್ಟಾಗಾತನಿಗಾದ ಮತ್ತು ತನಗಾದ ಅವಮಾನವನ್ನು ಮೆಟ್ಟಿ ಆತನನ್ನು ದೊಡ್ಡ ವ್ಯಕ್ತಿಯನ್ನಾಗಿಸಿದವಳು ಆತನ ಹೆತ್ತ ತಾಯಿ ಎಂಬುದು ನಮಗೆ ನೆನಪಿನಲ್ಲಿರಬೇಕು. ಯಾವ ಮಕ್ಕಳೂ ಸಹ ದಡ್ಡರೂ ಅಲ್ಲ ಹಾಗೆಯೇ ಅತೀವ ಬುದ್ದಿವಂತರೂ ಅಲ್ಲ. ತಾಯಿಯ ಗರ್ಭದಿಂದ ಆಚೆಗೆ ಬಂದು ಈ ಜಗಕ್ಕೆ ಅತಿಥಿಯಾದ ಎಲ್ಲಾ ಮಕ್ಕಳೂ ಸಹ ಖಾಲಿ ಕಂಪ್ಯೂಟರ್ ಗಳೇ ಆಗಿರುತ್ತಾರೆ. ದೈನಂದಿನ ಬದುಕು, ಪರಿಸರ, ತಂದೆ ತಾಯಿಯವರ ಮನಸ್ಥಿತಿಯ ಆಧಾರದಲ್ಲಿ ಉತ್ತಮರೋ ಅಥವಾ ಅಧಮರೋ ಆಗಿರುತ್ತಾರೆ ಆ ಮಕ್ಕಳುಗಳು. ಯಾವುದೇ ಮಗುವಿನ ಏಳಿಗೆಯಾಗಲಿ, ಬೀಳೇ ಆಗಲಿ ಎಲ್ಲಕ್ಕೂ ಕಾರಣಕರ್ತರುಗಳು ಅವರ ಹೆತ್ತವರೇ ಆಗಿರುತ್ತಾರೆ ಎನ್ನುವುದು ಸತ್ಯ. ಈ ಜಗವನ್ನೇ ಅರಿಯದ, ಅರ್ಥ ಮಾಡಿಕೊಳ್ಳದ ಎಳೆಯರು ಆತ್ಮಹತ್ಯೆಯನ್ನು ಮಾಡಿಕೊಂಡರೆ ಅದಕ್ಕೆ ನೇರ ಹೊಣೆ ಅವರ ಪೋಷಕರೇ ಆಗಿರುತ್ತಾರೆ ಎಂಬುದು ನಿಸ್ಂಶಯವಾಗಿರುತ್ತದೆ. ಮಕ್ಕಳನ್ನು ಹುಟ್ಟಿಸುವುದು ಯೋಗ್ಯತೆಯಲ್ಲ, ಹುಟ್ಟಿಸಿದ ಮಕ್ಕಳನ್ನು ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಗಳನ್ನು ಬೋಧನೆ ಮಾಡುತ್ತಾ ಆ ಮಕ್ಕಳನನು ಈ ಸಮಾಜದ ಆಸ್ತಿಯನ್ನಾಗಿ ಮಾಡುವುದೇ ನಿಜವಾದ ಯೋಗ್ಯತೆ ಎಂಬುದು ನನ್ನ ಮನಸ್ಥಿತಿ. ಅಮ್ಮನ ಬಿಸಿಯುಸಿರು ಹಾಗೂ ಅಪ್ಪನ ಬೆವರಿನ ವಾಸನೆ ಮಕ್ಕಳಿಗೆ ಪ್ರತಿದಿವೂ ತಾಗಬೇಕು ಎಂಬುದು ನನ್ನ ಮನದ ನಿಲುವು.

ಹುಬ್ಬಳ್ಳಿಯಲ್ಲಿ ಇಲ್ಲಿಯ ತನಕ ಜಗತ್ತನ್ನೇ ಅರಿಯದ ನಾಲ್ಕು ಎಳೆಯ ಮನಸ್ಸುಗಳು ತಮ್ಮನ್ನು ತಾವು ಅಂತ್ಯಗೊಳೀಸಿಕೊಂಡಿದ್ದಾರೆ. ಇನ್ನು ಇಡೀ ರಾಜ್ಯದಲ್ಲಿ‌ ಎಷ್ಟಿರಬಹುದು ? ರಾಷ್ಟ್ರದಲ್ಲಿ ಎಷ್ಟಿರಬಹುದು ? ಆ ಮಕ್ಕಳ ಸಾವಿಗೆ ನ್ಯಾಯವನ್ನಾದರೂ ಯಾರು ಕೊಡಬೇಕು ? ಇದಕ್ಕೆ ಕಾರಣ ಪೋಷಕರ ಭ್ರಮೆಯೇ ? ಪೊಷಕರ ಒತ್ತಡವೇ ? ಅತಿಯಾದ ನಿರೀಕ್ಷಣೆಯೇ ? ಅಥವಾ ಇತರ ಮಕ್ಕಳೊಂದಿಗೆ ಪೈಪೋಟಿಯೇ ? ಈ ಪ್ರಶ್ನೆಗಳನ್ನು ಅವರವರ ಮನೋಭಾವಕ್ಕೆ ಬಿಟ್ಟರೂ ಈ ಪ್ರಶ್ನೆಗಳಿಗೆ ಉತ್ತರ 100% ನಮ್ಮ ಊಹೆಗೆ ನಿಲುಕದ ನಕ್ಷತ್ರದ ಹಾಗೇ ಇದೆ. ಯಾರೋ ಮಕ್ಕಳು ಮನೆ ಬಿಟ್ಟು ನೆಡೆದಿರುತ್ತಾರೆ. ಇದಕ್ಕೆಲ್ಲಾ ಉತ್ತರ *ಗೊತ್ತಿಲ್ಲ*

ಮೊದಲಿಗೆ

1. ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಬಿಡಬೇಕು.

2. ಮಕ್ಕಳನ್ನು ಇತರೆ ಮಕ್ಕಳಿಗೆ ಹೋಲಿಸಿ ಮಾತನಾಡಬಾರದು.

3. ಮಕ್ಕಳ ಮುಂದೆ ಅವಾಚ್ಯ ಶಬ್ದಗಳನ್ನು ಉಪಯೋಗಿಸಬಾರದು.

4. ಮಕ್ಕಳ ಮುಂದೆ ಸಂಸ್ಕಾರಯುತ ಮಾತಿರಬೇಕು.

5. ಹೆತ್ತವರ ಮೊದಲ ತುತ್ತು ಆ ಮಕ್ಕಳಿಗೆ ಮೀಸಲಿರಬೇಕು.

6. ಕನಿಷ್ಟ ಎರಡು ಗಂಟೆ ಮಕ್ಕಳೊಂದಿಗೆ ಹರಟೆ ಹೊಡೆಯಬೇಕು.

7. ಮಕ್ಕಳಿಗೆ ಒಂದಿಲ್ಲದಿದ್ದರೂ ಮತ್ತೊಂದು ಅವಕಾಶವಿದೆ ಎಂದು ಸದೃಢರನ್ನಾಗಿ ಮಾಡಬೇಕು.

8. ವಿದ್ಯೆಯೆಂಬುದು ಜ್ಞಾನ, ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಪೋಷಕರು ಪತ್ತೆ ಹಚ್ಚಿ ಅವರಲ್ಲಿ ನಾನು ನಾಳೆ ದೊಡ್ಡ ವ್ಯಕ್ತಿತ್ವದ ಮನುಜನಾಗುವೆ ಎಂಬ ಸ್ವ ಸ್ವಾಭಿಮಾನ ಬೆಳೆಸಬೇಕು.

9. ಕೇವಲ ಅಂಕಗಳಿಂದ ನಮ್ಮ ಮಕ್ಕಳ ಯೋಗ್ಯತೆಯನ್ನು ಅಳೆಯಬಾರದು.

10. ಮಕ್ಕಳನ್ನು ಪ್ರೀತಿಸಬೇಕು, ಪ್ರೀತಿಸುತತಲೇ ಇರಬೇಕು.

11. ಮಕ್ಕಳಿಗೆ ಮಹಾಮಹಿಮರ ಕಥೆ ಹೇಳುತ್ತಿರಬೇಕು.

12. ಮಕ್ಕಳನ್ನು ಅಜ್ಜ ಅಜ್ಜಿಯರೊಂದಿಗೆ ಸರಸ ಸಲ್ಲಾಪದಲ್ಲಿ ಬೆಳೆಸಬೇಕು.‌

13. ನಮ್ಮ ಉದರದಲ್ಲಿ ಜನಿಸಿದ ಮಕ್ಕಳ ಬಗ್ಗೆ ಗೌರವ, ಪ್ರೀತಿ, ಹೆಮ್ಮೆ ತುಂಬಿರಬೇಕು.

14. ಮಕ್ಕಳಿಗೆ ಸಾಮಾನ್ಯಜ್ಞಾನ, ಲೋಕ ಜ್ಞಾನಕ್ಕೆ ಒತ್ತು ಕೊಟ್ಟು ಬೆಳಸಬೇಕು.

15. ಮಕ್ಕಳ ಮುಂದೆ ಭ್ರಷ್ಠಾಚಾರ, ಅಪ್ರಮಾಣಿಕತನದ ಬಗ್ಗೆ ಮಾತನಾಡಲೇಬಾರದು.

16. ಮಕ್ಕಳೊಂದಿಗೆ ಆಯಾ ದಿನದ ಲೋಕ ವಿಷಯಗಳ ಬಗ್ಗೆ ಅಪ್ಪ ಅಮ್ನನವರು ಡಿಸ್ಕಷನ್ ಮಾಡಬೇಕು.

ಹೀಗೆ ಹತ್ತು ಹಲವು ಆಯಾಮಗಳ್ಲಿ ಮಕ್ಕಳನ್ನು ಪೋಷಿಸುತ್ತಾ ಬೆಳೆಸಬೇಕು. ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಿ, ಒಂದಿಲ್ಲದಿದ್ದರೆ ಮತ್ತೊಂದೆನುವ ಭಾವವನ್ನು ಎಳೆಯದಿರಿಂದಲೇ ಬೆಳೆಸಬೇಕು. ಹೀಗೆ ಹೆತ್ತ ಪೋಷಕರು ಕಾಳಜಿವಹಿಸಿ ಬೆಳೆಸಿದರೆ ಮಾತ್ರವೇ ನಮ್ಮ ಉದರದಲ್ಲಿ ಬೆಳೆದವರು ನಾಳೆ ಈ ಸಮಾಜಕ್ಕೆ ಆಸ್ತಿಯಾಗುವರು, ಇಲ್ಲದೆ ಹೋದರೆ ಅವರು ಆತ್ಮಹತ್ಯೆಗೆ ಶರಣಾಗುತ್ತಾರೆ ಇಲ್ಲ ಈ ಸಮಾಜಕ್ಕೆ ಕಂಟಕವಾಗುತ್ತಾರೆ. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ಸಹ ಮಕ್ಕಳಿಗೆ ಪ್ರೀತಿ, ಕ್ಷಮೆ, ಬದುಕು, ಬಾಳು, ಭಾತೃತ್ವ, ಸಂಬಂಧಗಳನ್ನು ಬೆಳೆಸಬೇಕಲ್ಲದೆ, ಈರ್ಷ್ಯೆ, ಕೋಪ ತಾಪ, ಸೇಡು, ರೊಚ್ಚುಗಳನ್ನು ಬೆಳೆಸದಂತೆ ಕ್ರಮ ವಹಿಸಿದರೆ ಆ ಮಕ್ಕಳ ಬಾಳೇ ಬಂಗಾರವಾಗುತ್ತದೆ. ಮಕ್ಕಳು ನಮ್ಮನ್ನು ಕೇಳಿ ಹುಟ್ಟಿದವರಲ್ಲ ಎಂಬ ಭಾವ‌ ನಮಗಿದ್ದರೆ ಎಲ್ಲಕ್ಕೂ ಒಳ್ಳೆಯದು.

ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು ।
ಕತ್ತಲೆಯ ಮೊಡುಕು ಮೂಲೆಗಳ ಸೇರದಿರು ॥
ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ ।
ಮೃತ್ಯು ನಿನಗಲ್ಪತೆಯೊ – ಮಂಕುತಿಮ್ಮ

✍️ ರವೀ ಚಿಕ್ಕನಾಯಕನಹಳ್ಳಿ


Spread the love

Leave a Reply

Your email address will not be published. Required fields are marked *

You may have missed