Posts Slider

Karnataka Voice

Latest Kannada News

ಧಾರವಾಡ ಡಿಸಿ ಕಚೇರಿ ಸುತ್ತಲೂ ನಿಷೇಧಾಜ್ಞೆ ಜಾರಿ- ಯಾಕೆ ಗೊತ್ತಾ..?

Spread the love

ಹುಬ್ಬಳ್ಳಿ: ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಆರ್.ದಿಲೀಪ್ ನಿಷೇಧಾಜ್ಞೆ ಜಾರಿಗೆ ತಂದಿದ್ದು, ಅವರ ಯಥಾವತ್ತ್ ಪ್ರತಿಯನ್ನ ಈ ಕೆಳಗೆ ನಮೂದಿಸಲಾಗಿದೆ ನೋಡಿ..

ಕರ್ನಾಟಕ ವಿಧಾನ ಪರಿಷತ್ತಿನ ಪಶ್ವಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ, ಧಾರವಾಡ ಜಿಲ್ಲೆಯಲ್ಲಿ ದಿನಾಂಕ: 28-10-2020 ರಂದು ಚುನಾವಣೆಯು ಜರುಗಲಿರುತ್ತದೆ. ಚುನಾವಣೆ ಘೋಷಣೆಯಾದ ತಕ್ಷಣದಿಂದ ಅಂದರೆ ದಿನಾಂಕ; 29-09-2020 ರಿಂದ ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿರುತ್ತದೆ.  ಸದರ ಚುನಾವಣೆಯ ಯಾವತ್ತೂ  ಪ್ರಕ್ರಿಯೇಗಳು ಮುಕ್ತಾಯಗೊಳ್ಳುವವರೆಗೆ ಅಂದರೆ ದಿನಾಂಕ: 05-11-2020 ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.

ಚುನಾವಣೆಯ ವಿವಿಧ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ, ಚುನಾವಣೆಯ  ಅಧಿಸೂಚನೆಯಲ್ಲಿ ತಿಳಿಸಿರುವ ಚುನಾವಣೆಯ ವೇಳಾಪಟ್ಟಿಯಲ್ಲಿ  ನಮೂದಿಸಿರುವಂತೆ ದಿನಾಂಕ: 30-09-2020 ರಿಂದ 05-11-2020 ರವರೆಗೆ ಚುನಾವಣೆಯ ಯಾವತ್ತೂ ಕಾರ್ಯಗಳು ಸುಗಮವಾಗಿ ಮತ್ತು ಶಾಂತಿಯುತವಾಗಿ ಜರುಗುವ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಧಾರವಾಡ ಇವರ ಕಛೇರಿಗೆ 200 ಮೀಟರ್ ಅಂತರದವರೆಗೆ ಶಾಂತತೆಗೆ ಭಂಗ ಉಂಟಾಗದಂತೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಅಹಿತಕರ ಘಟನೆಗಳು ಇತ್ಯಾದಿ ನಿಯಂತ್ರಿಸುವ ದೃಷ್ಟಿಯಿಂದ ಸಿ.ಆರ್.ಪಿ.ಸಿ. 1973 ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರ ಪ್ರಕಾರ ಪ್ರದತ್ತವಾದ ಅಧಿಕಾರ ಹೊಂದಿದವನಾದ ನಾನು ಆರ್.ದಿಲೀಪ್, ಐಪಿಎಸ್., ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್ ಕಮೀಷನರ್, ಹುಬ್ಬಳ್ಳಿ-ಧಾರವಾಡ ಜಿಲ್ಲಾಧಿಕಾರಿಗಳು ಧಾರವಾಡ ಇವರ ಕಛೇರಿಗೆ 200 ಮೀಟರ್  ಅಂತರದವರೆಗೆ ದಿನಾಂಕ: 30-09-2020 ರಿಂದ 05-11-2020 ರವರಗೆ ಜಾರಿಗೆ ಬರುವಂತೆ ನಿಷೇದಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಿರುತ್ತೇನೆ.

  1. ಮೆರವಣಿಗೆ ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
  2. ಮೆರವಣೆಗೆ / ಬೈಕ್ ರ್ಯಾಲಿ, ವಾಹನಗಳಲ್ಲಿ ಧ್ವನಿವರ್ಧಕ ಬಳಸುವುದನ್ನು, ಬ್ಯಾನರ್, ಬಂಟಿಂಗ್ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.
  3. ಶಸ್ತ್ರ, ಬಡಿಗೆ, ಭರ್ಚಿ, ಖಡ್ಗ, ಬಂದೂಕು, ಚೂರಿ, ಕೋಲು, ಲಾಠಿ, ದೊಣ್ಣಿ, ಚಾಕು, ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಲು ಉಪಯೋಗಿಸಬಹುದಾದ ಯಾವುದೇ ಮಾರಕಾಸ್ತ್ರ ತೆಗೆದುಕೊಂಡು ಹೋಗುವುದನ್ನು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
  4. ಕಲ್ಲುಗಳನ್ನು, ಕ್ಷಾರ ಪದಾರ್ಥ ಇಲ್ಲವೇ ಸ್ಪೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ.
  5. ಕಲ್ಲುಗಳು ಅಥವಾ ಎಸೆಯುವಂಥ ವಸ್ತುಗಳನ್ನು ಎಸೆಯುವ ಆಥವಾ ಬಿಡುವ ಸಾಧನೆಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
  6. ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ.
  7. ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
  8. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ದೇಶಕಾರಿ ಹಾಡುಗಳು ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂಥಹ ಚಿತ್ರಗಳು ಚಿನ್ನೆಗಳು ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲೀ ಹಾಗೂ ಸಾರ್ವಜನಿಕರ ಗಾಂಭೀರ್ಯ ಮತ್ತು ನೈತಿಕತೆಗೆ ಭಂಗ ತರುವಂಥಹ ಆಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
  9. ಯಾವುದೇ ವ್ಯಕ್ತಿ ಸಾರ್ವಜನಿಕರಾಗಲೀ ಮೇಲೆ ವಿವರಿಸಿರುವ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳು ಹೊಂದಿದ್ದು ಕಂಡು ಬಂದ ಕೂಡಲೇ ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಮತ್ತು ಅಂಥಹ ಮಾರಕ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು ಅಲ್ಲದೇ ಸಂಬಂಧಿಸಿದ ವ್ಯಕ್ತಿಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗವುದು.
  1. ಈ ಆಜ್ಞೆಯು ಅಂತ್ಯಕ್ರಿಯೆ ಮೆರವಣಿಗೆಗಳಿಗೆ ಮತ್ತು ಇನ್ನಿತರ ಕಾರಣಗಳಿಗಾಗಿ ಅನುಮತಿ ಪಡೆದು ತೆಗೆಯಿಸಲಾದ ಮೆರವಣಿಗೆಗಳಿಗೆ ಅನ್ವಯಿಸುವದಿಲ್ಲ.
  2. ಈ ಆದೇಶವು ಮತದಾನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ / ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣೆ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ.

ಸದರಿ ಆಜ್ಞೆಯನ್ನು ಉಲ್ಲಂಘಿಸುವವರ ವಿರುದ್ದ ಕಲಂ 188 ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಮವನ್ನು ಜರುಗಿಸಲು ಸಂಬಂಧಪಟ್ಟ ಪಿ.ಐ ರವರಿಗೆ ಅನುಮತಿ ನೀಡಲಾಗಿದೆ.  ಈ ನಿಷೇಧಾಜ್ಞೆಯನ್ನು ಈ ದಿವಸ ಅಂದರೆ ದಿನಾಂಕ: 30/09/2020 ರಂದು ನನ್ನ ಹಸ್ತಾಕ್ಷರ ಹಾಗೂ ಮುದ್ರೆಯೊಂದಿಗೆ ಹೊರಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *