Posts Slider

Karnataka Voice

Latest Kannada News

ಮಾಸ್ಕ್ ಹಾಕಲ್ವಾ..? ಕೊರೋನಾ ಟೆಸ್ಟ್ ಗೆ ರೆಡಿಯಾಗಿ: ಧಾರವಾಡ ಜಿಲ್ಲಾಧಿಕಾರಿ ಆರ್ಡರ್

1 min read
Spread the love

ಧಾರವಾಡ: ಕೋವಿಡ್ ತಪಾಸಣೆಯ ಪ್ರಮಾಣ ಹೆಚ್ಚು ಮಾಡಲು ನಾಳೆ ಅಗಸ್ಟ್ 18 ರಿಂದ ಹುಬ್ಬಳ್ಳಿ ಧಾರವಾಡ ಅವಳಿನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. ಬಸ್ ನಿಲ್ದಾಣ, ಮಾರುಕಟ್ಟೆ ಮತ್ತಿತರ ಜನನೀಬಿಡ ಸ್ಥಳಗಳಲ್ಲಿ  ಕಾರ್ಯಾಚರಣೆ ಕೈಗೊಳ್ಳಲು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಎಲ್ಲಾ ತಹಸೀಲ್ದಾರ ನೇತೃತ್ವದಲ್ಲಿ ,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು,ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಹಾತ್ಮ ಗಾಂಧಿ ನರೇಗಾ ಸಹಾಯಕ ನಿರ್ದೇಶಕರು,ಪೊಲೀಸ್ ಇನ್ಸ್ ಪೆಕ್ಟರ್ ಮತ್ತಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಡಾಟಾ ಎಂಟ್ರಿ ಆಪರೇಟರ್ ಗಳನ್ನು  ಒಳಗೊಂಡ ಸಂಚಾರಿ ಕೋವಿಡ್ ತಪಾಸಣೆ ತಂಡಗಳು ಮಾಸ್ಕ್ ಧರಿಸಿದ ವ್ಯಕ್ತಿಗಳನ್ನು ಕೋವಿಡ್ ತಪಾಸಣೆ ಮಾಡುವ ಕಾರ್ಯಾಚರಣೆ ಕೈಗೊಳ್ಳಲಿವೆ. ಎಲ್ಲಾ ನಗರ ಮತ್ತು ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ಬರುವ ಹೊರ ರೋಗಿಗಳನ್ನೂ ಕೂಡ ಕೋವಿಡ್ ತಪಾಸಣೆಗೆ ಒಳಪಡಿಸಬೇಕು. ಜಿಲ್ಲೆಯ ಕೋವಿಡ್ ಕೇರ್ ಸೆಂಟರುಗಳಲ್ಲಿ ಉತ್ತಮ ಊಟ ಪೂರೈಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ. ಕ್ರೀಡಾ, ಮನರಂಜನಾ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿರಿಸಬೇಕು .ಔಷಧ ದಾಸ್ತಾನು ಸಮರ್ಪಕವಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಜಿಲ್ಲೆಯಾದ್ಯಂತ ಮಧುಮೇಹ,ರಕ್ತದೊತ್ತಡ, ಕ್ಷಯ,ಕುಷ್ಟರೋಗ,ಹೆಚ್ ಐ ವಿ, ಪಾರ್ಶ್ವವಾಯು ಮತ್ತಿತರ ಕೊ- ಮಾರ್ಬಿಡಿಟಿ ಲಕ್ಷಣಗಳಿರುವ  ವ್ಯಕ್ತಿಗಳು, ಹಿರಿಯ ನಾಗರಿಕರು,ಗರ್ಭಿಣಿಯರನ್ನೂ ಕೂಡ ಕೋವಿಡ್ ತಪಾಸಣೆಗೆ ಒಳಪಡಿಸುವ ಕಾರ್ಯ ಕೈಗೊಳ್ಳಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಡಾ.ಷಣ್ಮುಖ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್ ಚವ್ಹಾಣ, ಡಾ.ಲಕ್ಷ್ಮೀಕಾಂತ ಲೋಕರೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *