“ಡ್ಯಾಜಲಿಂಗ್ ಧಾರವಾಡ” ಬೆರಗುಗೊಳಿಸುವ ಛಾಯಾಚಿತ್ರ: ಧಾರವಾಡ ಜಿಲ್ಲೆಯ ಸಂಸ್ಕ್ರತಿ ಅನಾವರಣ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಇತಿಹಾಸ, ಕೆಲೆ ,ಸಾಹಿತ್ಯ, ಸಂಸ್ಕೃತಿ, ವನ್ಯಜೀವಿಗಳು, ನಿಸರ್ಗ, ಪ್ರವಾಸೋದ್ಯಮ ಕುರಿತು ಮಾಹಿತಿ ಉಳ್ಳ “ಡ್ಯಾಜಲಿಂಗ್ ಧಾರವಾಡ” ಕಾಫಿ ಟೇಬಲ್ ಪುಸ್ತಕವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಇಂದು ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ನಲ್ಲಿ ಬಿಡುಗಡೆ ಗೊಳಿಸಿದರು.
ನಂತರ ಮಾತನಾಡಿದ ಅವರು, ಹೊರ ಜಿಲ್ಲೆ, ಹೊರ ರಾಜ್ಯಗಳು ಮತ್ತು ವಿದೇಶಿದಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪುಸ್ತಕದಿಂದ ಜಿಲ್ಲೆಯ ಸಂಪೂರ್ಣ ವಿವರ ದೊರೆಯಲಿದೆ. ಧಾರವಾಡ ಜಿಲ್ಲೆ ಮಲೆನಾಡು ಹಾಗೂ ಬಯಲು ಸೀಮೆ ಸಂಧಿಸುವ ಜಾಗವಾಗಿದೆ. ಜಿಲ್ಲೆಯ ಕಲಘಟಗಿ ಹಾಗೂ ಧಾರವಾಡ ಗ್ರಾಮೀಣ ಭಾಗದಲ್ಲಿ ಹಚ್ಚ ಹಸಿರಿನ ಕಾನನಗಳಿವೆ. ಜಿಲ್ಲೆಯ ಉಳಿದ ತಾಲೂಕುಗಳು ಬಯಲು ಸೀಮೆಯಲ್ಲಿವೆ. ಧಾರವಾಡ ಜಿಲ್ಲೆ ಸಾಹಿತ್ಯ ಕಲೆ ಸಂಗೀತ ಗಳಿಗೆ ಹೆಸರುವಾಸಿಯಾಗಿದೆ. ಪಂಡಿತ್ ಭೀಮ್ ಸೇನ್ ಜೋಶಿ, ಗಂಗೂಬಾಯಿ ಹಾನಗಲ್, ದ.ರಾ.ಬೇಂದ್ರೆ, ಗಿರೀಶ್ ಕಾರ್ನಾಡ್, ಆನಂದ ಬೆಟಗೇರಿ ಶರ್ಮ ಮುಂತಾದ ಮಹನೀಯರು ಜಿಲ್ಲೆಯನ್ನು ಹೆಸರು ವಾಸಿಯಾಗಿಸಿದ್ದಾರೆ. ಜಿಲ್ಲೆಯ ಆಹಾರ ಪದ್ಧತಿ ವಿಷೇಶವಾಗಿದ್ದು ಧಾರವಾಡ ಪೇಡ, ಗರ್ಮಿಟ್ ಮಿರ್ಚಿ, ಸಾವಾಜಿ ಖಾನವಳಿ ಊಟ ನಾಡಿನಾದ್ಯಂತ ಪರಿಚಿತವಾಗಿವೆ. ಜಿಲ್ಲೆಯಲ್ಲಿ ಹೆಸರುವಾಸಿಯಾದ ಧಾರ್ಮಿಕ ಕೇಂದ್ರಗಳು, ಅಪರೂಪದ ವನ್ಯಜೀವಿಗಳು ಇದ್ದು ಇವೆಲ್ಲವುಗಳನ್ನು ಪುಸ್ತಕದಲ್ಲಿ ಉತ್ತಮ ಛಾಯಚಿತ್ರಗಳ ವಿವರಣೆಗಳೊಂದಿಗೆ ನೀಡಲಾಗಿದೆ. ಈ ಪುಸ್ತಕವನ್ನು ದೇಶದ ಪ್ರಸಿದ್ದ ಏರ್ ಪೋರ್ಟ್ ಗಳಲ್ಲಿ ಇರಿಸುವುದರ ಮೂಲಕ ಪ್ರವಾಸಿಗರನ್ನು ಜಿಲ್ಲೆಯಡೆ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಜಿಲ್ಲೆಯ ಪ್ರವಾಸೋದ್ಯಮಕ್ಕೆ ದಿಕ್ಸೂಚಿಯಾಗುವ ನಿಟ್ಟಿನಲ್ಲಿ ಡ್ಯಾಜಲಿಂಗ್ ಧಾರವಾಡ ಕಾಫಿ ಟೇಬಲ್ ಬುಕ್ ಪುಸ್ತಕ ಹೊರತರಲಾಗಿದೆ. ಪ್ರಸ್ತುತ ಇಂಗ್ಲೀಷ್ ಅವರತಣಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಕನ್ನಡದಲ್ಲೂ ಪುಸ್ತಕವನ್ನು ಮುದ್ರಿಸಿ ಬಿಡಿಗಡೆ ಮಾಡಲಾಗುತ್ತದೆ. ಪುಸ್ತಕ ರಚನೆಗಾಗಿ ಸಮಿತಿಯನ್ನು ರಚಿಸಲಾಗದ್ದು, 17 ಜನ ವಿಷಯ ತಜ್ಞರು, 15 ಛಾಯಾಗ್ರಹಕರು ಪುಸ್ತಕ ರಚನೆಯಲ್ಲಿ ಶ್ರಮವಹಿಸಿದ್ದಾರೆ. ಸುಮಾರು 152 ಪುಟಗಳ ಈ ಪುಸ್ತಕದಲ್ಲಿ ಸುಮಾರು 313 ಜಿಲ್ಲೆಯ ಕಲೆ,ಸಂಸ್ಕೃತಿ, ಪರಂಪರೆ, ನಿಸರ್ಗದ ಚೆಲುವು ಬಿಂಬಿಸುವ ಅಪರೂಪದ ಸುಂದರ ಫೋಟೋಗಳಿವೆ. ಸದ್ಯ ಒಂದು ಸಾವಿರ ಪ್ರತಿಗಳನ್ನು ಜಿ್ಲಲ್ಲೆಯ ಸಾರ್ವಜನಿಕ ಪ್ರದೇಶಗಳು, ರೈಲ್ವೇ, ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ಇರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಅರವಿಂದ ಬೆಲ್ಲದ, ಶಂಕರ್ ಪಾಟೀಲ ಮುನೇನಕೊಪ್ಪ, ಪ್ರಸಾದ್ ಅಬ್ಬಯ್ಯ, ಪ್ರದೀಪ್ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯ ನಿರ್ದೇಶಕ ಮಂಜುನಾಥ ಡೊಳ್ಳಿನ,ಪ್ರವಾಸೋದ್ಯಮ ಇಲಾಖೆ ಸಹಾಯ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.