ಸಿಪಿಐ ವಿರುದ್ಧ ಮಾನಭಂಗ ಪ್ರಕರಣ- ರಸ್ತೆಯಲ್ಲೇ ಪ್ರಯತ್ನ ಪಟ್ರಾ..! ದೂರು-ಪ್ರತಿದೂರು
1 min readಬೆಳಗಾವಿ: ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಮಾನಭಂಗಕ್ಕೆ ಯತ್ನ ಪಟ್ಟು, ರಸ್ತೆಯಲ್ಲಿ ಹೂತು ಹಾಕುವ ಧಮಕಿ ಕೊಟ್ಟಿದ್ದಲ್ಲದೇ ತಮ್ಮನ್ನ ತಾವು ಬೆಳಗಾವಿ ಡಾನ್ ಎಂದು ಹೇಳಿಕೊಂಡಿದ್ದಾರೆಂಬ ದೂರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹುಕ್ಕೇರಿ ಠಾಣೆ ಸಿಪಿಐ ಕಲ್ಯಾಣ ಶೆಟ್ಟಿ ಆರೋಪಗಳಿಗೆ ಒಳಗಾಗಿದ್ದು, ಅವರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಶಹಾಪುರದ ಅಲ್ವಾನ್ ಗಲ್ಲಿ ನಿವಾಸಿ 34 ವರ್ಷದ ಪ್ರಿಯಾಂಕಾ ಸುನೀಲ ಕುರಣಕರ್ ಎನ್ನುವವರು ದೂರು ದಾಖಲಿಸಿದ್ದಾರೆ.
“ಅ.13ರಂದು ರಾತ್ರಿ 11.15ರ ಹೊತ್ತಿಗೆ ತಾವು ಸಂಬಂಧಿಕರ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಖಾನಾಪುರ ತಾಲೂಕಿನ ಕುಸಮಳಿಯ ರೆಸಾರ್ಟ್ ನಿಂದ ಹಿಂತಿರುಗುತ್ತಿದ್ದೆವು. ಈ ವೇಳೆ, ಅಲ್ಲಿನ ರಸ್ತೆಯ ಅವ್ಯವಸ್ಥೆಯಿಂದಾಗಿ ನಾವು ಪ್ರಯಾಣಿಸುತ್ತಿದ್ದ ಇನೋವಾ ಕಾರು ಮುಂದಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಾವು ಅವರ ಬಳಿ ಕ್ಷಮೆ ಕೇಳಿ, ಕಾರಿನ ದುರಸ್ತಿ ವೆಚ್ಚ ಭರಿಸುವುದಾಗಿ ತಿಳಿಸಿದೆವು.
ಮಾತುಕತೆ ಮುಂದುವರಿಯುತ್ತಿದ್ದಾಗಲೇ ಅಲ್ಲಿಗೆ ಬಂದ ಹುಕ್ಕೇರಿ ಸಿಪಿಐ ಕಲ್ಯಾಣ ಶೆಟ್ಟಿ ಮತ್ತು ಇತರ 4 -5 ಜನರು ರಿವಾಲ್ವರ್ ತೋರಿಸಿ ನಮಗೆ ಜೀವ ಬೆದರಿಕೆ ಹಾಕಿದರು. ನಮ್ಮ ಜೊತೆಗಿದ್ದ ನನ್ನ ಪತಿ ಮತ್ತು ಸಂಬಂಧಿಕರಿಗೆಲ್ಲ ಮನಬಂದಂತೆ ಥಳಿಸಿದರು. ನಾನು ಸೇರಿದಂತೆ ಜೊತೆಗಿದ್ದ ಕೆಲವು ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದರು. ನಿಮ್ಮೆಲ್ಲರ ಮೇಲೆ ಅತ್ಯಾಚಾರ ಮಾಡಿ ತೆಗ್ಗಿನಲ್ಲಿ ಹಾಕಿಹೊಗುತ್ತೇನೆ. ನಾನು ಬೆಳಗಾವಿಯ ಡಾನ್. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಯಾರಿಗಾದರೂ ತಿಳಿಸಿದರೆ ನಿಮ್ಮನ್ನು ಮುಗಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದರು” ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪ್ರತಿದೂರು: ಕಲ್ಯಾಣ ಶೆಟ್ಟಿ ಮತ್ತು ಕುಟುಂಬ ಸಹ ದೂರು ದಾಖಲಿಸಿದೆ. ಕಲ್ಯಾಣ ಶೆಟ್ಟಿ ಕುಟುಂಬ ಸಹ ಒಂದು ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಎರಡು ವಾಹನಗಳಲ್ಲಿ ಬರುತ್ತಿತ್ತು. ಕಲ್ಯಾಣ ಶೆಟ್ಟಿ ಕಾರು ಮುಂದೆ ಹೋಗಿತ್ತು. ಹಿಂದಿನಿಂದ ಅವರ ತಾಯಿ ಮತ್ತಿತರರು ಬರುತ್ತಿದ್ದರು. ಆ ಕಾರಿಗೆ ಪ್ರಿಯಾಂಕಾ ಎನ್ನುವವರು ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ವಾಹನದಲ್ಲಿ 12 -15 ಜನರಿದ್ದರು. ಕಲ್ಯಾಣ ಶೆಟ್ಟಿ ಕುಟುಂಬದವರು ಕೇವಲ 5 ಜನರಿದ್ದರು. ತಾವೇ ಡಿಕ್ಕಿ ಹೊಡೆದು ಕಾರಿಗೆ ಕಲ್ಲು ತೂರಿ, ಹಲ್ಲೆ ನಡೆಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಕಲ್ಯಾಣ ಶೆಟ್ಟಿ ವಾಪಸ್ ಬಂದಿದ್ದಾರೆ. ಆದರೆ, ಕಲ್ಯಾಣ ಶೆಟ್ಟಿ ಬಳಿ ರಿವಾಲ್ವರ ಇರಲಿಲ್ಲ. ಅವರು ರಜೆಯ ಮೇಲಿದ್ದರು, ಪೊಲೀಸ್ ಡ್ರೆಸ್ ನಲ್ಲಿರಲಿಲ್ಲ. ಅವರ ತಾಯಿ ಮತ್ತು ಕುಟುಂಬದ ಮೇಲೆ ಹಲ್ಲೆ ನಡೆಸಿ, ಕಾರಿಗೆ ಕಲ್ಲು ತೂರಿ ಸಿಪಿಐ ಕಲ್ಯಾಣ ಶೆಟ್ಟಿ ಅವರನ್ನು ಥಳಿಸಿದ್ದಾರೆ ಎಂದು ದೂರು ನೀಡಲಾಗಿದೆ.
ಇಡೀ ಪ್ರಕರಣ ಸಂಶಯಾಸ್ಪದವಾಗಿದೆ. ಈ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ, ತನಿಖೆ ನಡೆದ ನಂತರ ನಿಜಾಂಶ ಹೊರಬರಲಿದೆ. ಆದರೆ ಮೇಲ್ನೋಟಕ್ಕೆ ಕಲ್ಯಾಣ ಶೆಟ್ಟಿ ವಿರುದ್ಧದ ದೂರಿನಲ್ಲಿ ಸತ್ಯಾಂಶ ಇರುವಂತೆ ಕಾಣಿಸುತ್ತಿಲ್ಲ ಎಂದಿದ್ದಾರೆ. ಆದರೆ, ಸಿಪಿಐ ಮೇಲೆ ದೂರು ದಾಖಲಾಗಲು ಓರ್ವ ರಾಜಕಾರಣಿಯ ಕೈವಾಡವಿದೆ ಎನ್ನಲಾಗುತ್ತಿದೆ.