ಹುಬ್ಬಳ್ಳಿಯಲ್ಲಿ ಯುವತಿಗೆ ಚಾಕು ಹಾಕಿದ್ದ ಯುವಕನಿಗೆ ನ್ಯಾಯಾಲಯ ನೀಡಿದ ಶಿಕ್ಷೆ ಏನೂ ಗೊತ್ತಾ…!?
1 min readಹುಬ್ಬಳ್ಳಿ: ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್ ದಲ್ಲಿ ಪ್ರಿಯತಮೆಗೆ ಚಾಕು ಹಾಕಿ, ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯನ್ನ ನೀಡಿ ಹುಬ್ಬಳ್ಳಿಯ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಕೆ.ಎನ್. ಆದೇಶ ಹೊರಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನವಿ ಮೂಲದ ಅಭಿನವ ಹನಮಂತರಾವ ಕುಲಕರ್ಣಿ ಎಂಬಾತ 2015ರ ನವೆಂಬರ್ 29ರಂದು ಮಾಲ್ ನಲ್ಲಿ ಮೇಘನಾ ಎಂಬ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿ, ತಾನು ಕೂಡಾ ಅದೇ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಪ್ರಕರಣ ಗೋಕುಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಆ ಸಮಯದಲ್ಲಿ ಗೋಕುಲ ಠಾಣೆಯ ಸಬ್ ಇನ್ಸಪೆಕ್ಟರ್ ಎಸ್.ಕೆ.ಕುರಗೋಡಿ ಪ್ರಕರಣ ದಾಖಲು ಮಾಡಿಕೊಂಡು ದೋಷಾರೋಪಣ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 307 ಕೇಸಿನಲ್ಲಿ 7 ವರ್ಷ ಕಠಿಣ ಶಿಕ್ಷೆ ಒಂದು ಲಕ್ಷ ರೂಪಾಯಿ ದಂಡ, ಹಣ ಕಟ್ಟದೇ ಇದ್ದಲ್ಲಿ ಎರಡು ವರ್ಷದ ಸಾದಾ ಶಿಕ್ಷೆ, 354 ಕೇಸಿನಲ್ಲಿ ಒಂದೂವರೆ ವರ್ಷ ಕಠಿಣ ಶಿಕ್ಷೆ, ಹತ್ತು ಸಾವಿರ ರೂಪಾಯಿ ದಂಡ ಹಾಗೂ 309 ಕೇಸಿನಲ್ಲಿ 6 ತಿಂಗಳು ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡವನ್ನ ವಿಧಿಸಿ ನ್ಯಾಯಾಧೀಶರಾದ ಗಂಗಾಧರ ಕೆ.ಎನ್ ಅವರು ಆದೇಶ ನೀಡಿದ್ದಾರೆ.
ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದ್ದರು.