ವಿದ್ಯಾಗಮ ಆವಾಂತರ: ಫಸ್ಟ್ ಶಿಕ್ಷಕರಿಗೆ ಕೊರೋನಾ, ನಂತರ 4 ವಿದ್ಯಾರ್ಥಿಗಳಿಗೆ, ಇದೀಗ 5 ಶಾಲೆ ಸೀಲ್ ಡೌನ್- 207 ಮಕ್ಕಳಿಗೆ ಕೋವಿಡ್ ಟೆಸ್ಟ್
ಕಲಬುರಗಿ: ವಿದ್ಯಾಗಮ ಯೋಜನೆಯಲ್ಲಿ ವಠಾರ ಶಾಲೆ ನಡೆಸುತ್ತಿದ್ದ ಓರ್ವ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳನ್ನ ತಪಾಸಣೆ ಮಾಡಿದಾಗ ನಾಲ್ಕು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ.
ಸುಮಾರು 20 ದಿನಗಳ ಹಿಂದೆ ಮಾಶಾಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗೆ ಕೊರೋನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಶಾಲೆಯ 20 ಶಿಕ್ಷಕರ ಕೋವಿಡ್ ಟೆಸ್ಟ್ ನಡೆಸಲಾಗಿದ್ದು ಎಲ್ಲರ ವರದಿಯೂ ನೆಗೆಟಿವ್ ಬಂದಿತ್ತು. 865 ವಿದ್ಯಾರ್ಥಿಗಳ ಶಾಲೆಯ 207 ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ನಡೆಸಲಾಗಿದ್ದು, ಇದರಲ್ಲಿ 4 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ, ಇನ್ನೂ 24 ವಿದ್ಯಾರ್ಥಿಗಳ ವರದಿ ಬರಬೇಕಿದೆ.
ಈ ಹಿನ್ನೆಲೆಯಲ್ಲಿ ಮಾಶಾಳ ಗ್ರಾಮದ ಐದು ಶಾಲೆಗಳನ್ನ ಸೀಲ್ ಡೌನ್ ಮಾಡಲಾಗಿದ್ದು, ಶಿಕ್ಷಕರು ಹೋಗದ ಹಾಗೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಲೆಗಳು ಆರಂಭವಾಗಬೇಕೋ ಬೇಡವೋ ಎಂಬ ನೂರೆಂಟು ಜಿಜ್ಞಾಸೆಗಳ ನಡುವೆ ಈ ಘಟನೆ ಮತ್ತಷ್ಟು ಆತಂಕವನ್ನ ಪಾಲಕರಲ್ಲಿ ಮೂಡಿಸಿದೆ. ವಿದ್ಯಾಗಮ ಯೋಜನೆಯೇ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತಿದ್ದು, ಶಿಕ್ಷಕರು ಕೂಡಾ ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದೆ.