36 ಗಂಟೆಯಲ್ಲಿ ಐವರು ಸರಕಾರಿ ಶಾಲೆ ಶಿಕ್ಷಕರು ಕೋವಿಡ್ ನಿಂದ ಸಾವು…!
1 min readಬೆಂಗಳೂರು: ಕೊರೋನಾ ಪಾಸಿಟಿವ್ ಪ್ರಕರಣಗಳು ರಾಜ್ಯಾಧ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಸಾವುಗಳು ನಿರಂತರವಾಗಿ ನಡೆಯುತ್ತಿವೆ. 36 ಗಂಟೆಯಲ್ಲಿ ಐವರು ಶಿಕ್ಷಕರು ಸಾವಿಗೀಡಾಗಿದ್ದು, ಇಲಾಖೆಯಲ್ಲಿ ತಲ್ಲಣ ಮೂಡಿಸಿದೆ.
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಸರಕಾರಿ ಶಾಲೆಯ ಶಿಕ್ಷಕ ಅಮ್ಜಉಸೇನ್ ಅವರು ಮೃತರಾಗಿದ್ದಾರೆ. ಸದಾಕಾಲ ಹಸನ್ಮುಖಿಯಾಗಿದ್ದ ಶಿಕ್ಷಕರು ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು.
ದೈಹಿಕ ಶಿಕ್ಷಕ ಸಂಪಂಗಿರಾಮಯ್ಯ ಕೋವಿಡ್ -19 ಕಾರಣದಿಂದಾಗಿ ನಿಧನರಾಗಿದ್ದಾರೆ. ಬಗಲಗುಂಟೆ ಉತ್ತರ ವಲಯ 4 ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಈ ಮೊದಲು ಇವರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಿದ್ದನಹೊಸಹಳ್ಳಿ ಉತ್ತರ ವಲಯ-1 ಇಲ್ಲಿ ದೈಹಿಕ ಶಿಕ್ಷಕರಾಗಿದ್ದರು.
ವಿಜಯಪುರ ಜಿಲ್ಲೆಯ ಮಿಂಚನಾಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಕೆ.ಹರಿಜನ ಅವರು ಕೂಡಾ, ಕೊರೋನಾ ಸೋಂಕಿನಿಂದ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಶಿಕ್ಷಕ ಹರಿಜನ ಕೂಡಾ ಸಾವಿಗೀಡಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಮಾಣಿಕ ಸಾಗರ ಎಂಬುವವರು ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿನ ಕೆಲವರು ಕೊರೋನಾ ಸಮಯದಲ್ಲಿ ನಿಧನರಾಗುತ್ತಿರುವುದು ತೀವ್ರ ಆತಂಕಕ್ಕೆ ಮನೆ ಮಾಡಿದೆ.
ಬೆಂಗಳೂರು ಉತ್ತರ ವಲಯ-3 ರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಯ್ಯ COVID-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ಉತ್ತರ ವಲಯ-3 ರ ಶಿಕ್ಷಕರ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದವರು ಇನ್ನಿಲ್ಲವಾಗಿದ್ದಾರೆ. ವಲಯ-3 ರ ಎಲ್ಲ ಮುಖ್ಯ ಶಿಕ್ಷಕರೊಂದಿಗೆ, ಸಹ ಶಿಕ್ಷಕರೊಂದಿಗೆ ಅವಿನಾಭಾವ ಸಂಬಂಧದೊಂದಿಗೆ ಪ್ರತಿ ಶಿಕ್ಷಕರನ್ನು ಗೌರವದಿಂದ ಕಾಣುತ್ತಿದ್ದ ಚಂದ್ರು ಅವರು ಇನ್ನಿಲ್ಲವಾಗಿರುವುದು ಬೇಸರದ ಸಂಗತಿಯಾಗಿದೆ.
ಮೃತ ಕುಟುಂಬದ ಸದಸ್ಯರಿಗೆ ನೋವನ್ನ ಭರಿಸುವ ಶಕ್ತಿಯನ್ನ ನೀಡುವ ಜೊತೆಗೆ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಶಿಕ್ಷಕ ವಲಯ ಪ್ರಾರ್ಥಿಸಿದೆ.