ಒಂದೇ ದಿನ-ಒಂದೇ ತಾಲೂಕು: ಮೂರು ಶಿಕ್ಷಕರು ಕೊರೋನಾದಿಂದ ಸಾವು- ಬೆಚ್ಚಿಬಿದ್ದ ಶಿಕ್ಷಕ ಸಮೂಹ
ಹಾವೇರಿ: ಮಹಾಮಾರಿ ಕೊರೋನಾ ವೈರಸ್ ಶಿಕ್ಷಕ ಸಮೂಹವನ್ನ ಬೆಂಬಿಡದೇ ಕಾಡುತ್ತಿದ್ದು, ವಿದ್ಯಾಗಮ ಯೋಜನೆಯಲ್ಲಿ ಭಾಗಿಯಾಗಿದ್ದ ಒಂದೇ ತಾಲೂಕಿನ ಮೂವರು ಶಿಕ್ಷಕರು ಕೊರೋನಾದಿಂದ ಸಾವಿಗೀಡಾಗಿದ್ದು, ಜಿಲ್ಲೆಯ ಶಿಕ್ಷಕ ಸಮೂಹ ಆತಂಕ್ಕೆ ಒಳಗಾಗಿದೆ.
ಹಿರೇಕೆರೂರು ಸಿದ್ದೇಶ್ವರನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಆರ್.ಡಿ. ಸಣ್ಣಪ್ಪನವರ ಕೊರೋನಾದಿಂದ ಮೃತರಾಗಿದ್ದು, ಮೃತ ಶಿಕ್ಷಕರಿಗೆ ಎರಡು ಗಂಡು ಮಕ್ಕಳಿದ್ದು, ಓರ್ವ 5ನೇ ತರಗತಿ ಮತ್ತೋರ್ವ 7ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಮೂಲತಃ ಹಾನಗಲ್ ತಾಲೂಕಿನ ಕುಂಚೂರು ಗ್ರಾಮದ ಪಿ.ಎಚ್.ತಿಮ್ಮಲಾಪುರ ಕೂಡಾ ಕೊವೀಡ್-19ಗೆ ಬಲಿಯಾಗಿದ್ದಾರೆ. ಕಡೂರಿನ ಸರಕಾರಿ ಶಾಲೆಯ ಶಿಕ್ಷಕರಾಗಿದ್ದ ಇವರಿಗೂ ಎರಡು ಮಕ್ಕಳಿದ್ದಾರೆ.
ಕುಡುಪಲ್ಲಿಯ ಸರಕಾರಿ ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಆರ್.ಟಿ.ಹೊಸಮನಿ ಕೂಡಾ ಕೊರೋನಾ ವೈರಸ್ ತಗುಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಮೃತರಿಗೆ ಒಂದು ಗಂಡು ಮಗುವಿದೆ.
ಇಷ್ಟೇಲ್ಲಾ ಆದ ನಂತರ ಎಚ್ಚೆತ್ತುಗೊಂಡಿರುವ ಹಾವೇರಿ ಜಿಲ್ಲೆಯ ಡಿಡಿಪಿಐ ಸೂಚನೆಯನ್ನ ನೀಡಿದ್ದಾರೆ.. ಅದೇನು ಎಂಬುದನ್ನ ನೋಡಿ ಇಲ್ಲಿದೆ..
ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ:
ಹಿರೇಕೆರೂರ್ ತಾಲೂಕಿನಲ್ಲಿ 3 ಜನ ಶಿಕ್ಷಕರು ಕೊರೋನಾ ವೈರಸ್ಸಿನಿಂದ ಮರಣ ಹೊಂದಿರುವುದು ವಿಷಾದನೀಯವಾದುದು. ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲ ಶಿಕ್ಷಕರಿಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮತ್ತೊಮ್ಮೆ ಸೂಚನೆ ನೀಡುವುದು.
- ಮಾಸ್ಕ್ ಧರಿಸುವುದು
- ದೈಹಿಕ ಅಂತರ ಕಾಯ್ದುಕೊಳ್ಳುವುದು.
- ಪ್ರತಿದಿನ ಬಿಸಿನೀರು ಕುಡಿಯುವುದು.
- ಯೋಗ ಪ್ರಾಣಾಯಾಮ ಮಾಡುವುದು.
- ಸ್ಯಾನಿಟೈಸರ್ ಮತ್ತು ಆಗಾಗ್ಗೆ ಸಾಬೂನಿನಿಂದ ಕೈತೊಳೆದುಕೊಳ್ಳುವುದು ಕಡ್ಡಾಯವಾಗಿ ಮಾಡಬೇಕು.
- ಕೆಮ್ಮು ನೆಗಡಿ ಜ್ವರ ಬಂದಾಗ ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು, ಅವರ ಸಲಹೆ ಮೇರೆಗೆ ಮನೆಯಲ್ಲಿ ಚಿಕಿತ್ಸೆ ಪಡೆಯುವಂತ ವ್ಯವಸ್ಥೆ ಮಾಡಿಕೊಳ್ಳಬೇಕು.
- ಎಲ್ಲಕ್ಕಿಂತ ಮುಖ್ಯವಾಗಿ ಧೈರ್ಯದಿಂದ ಇರಬೇಕು.
ಇವುಗಳನ್ನು ಅನುಸರಿಸಲು ಮತ್ತೊಮ್ಮೆ ಕೋರಿದೆ.
ಅಂದಾನಪ್ಪ ಎಂ ವಡಿಗೇರಿ
ಮಾನ್ಯ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾವೇರಿ.