ಕೊರೋನಾ ಪಾಸಿಟಿವ್ ಸಂಪರ್ಕಿತರ ನಕಲಿ ಹೆಸರು ಕೊಡುವಂತೆ ಕೇಳಿದ ಅಧಿಕಾರಿ ಅಮಾನತ್ತು

ಬೀದರ: ಕೋವಿಡ್-19 ರೋಗಿಯ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಿತರನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಬೀದರ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಬಿದ್ರಿಯ ಕಿರಿಯ ಆರೋಗ್ಯ ಸಹಾಯಕ ರಾಜಶೇಖರ ಅಮಾನತ್ತುಗೊಂಡಿದ್ದಾರೆ.
ಅಮಾನತ್ತು ಮಾಡಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ರಾಜಶೇಖರನ್ನ ಕೊರೋನಾ ಸೋಂಕಿತ ವ್ಯಕ್ತಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನ ಪತ್ತೆ ಹಚ್ಚಲು ನಿಯುಕ್ತಿ ಮಾಡಲಾಗಿತ್ತು. ಆದ್ರೆ, ಇವರು ಸ್ಥಳಕ್ಕೆ ಹೋಗದೆ ನಕಲಿ ಹೆಸರುಗಳನ್ನ ಕೊಡುವಂತೆ ಕೊರೋನಾ ಸಂಪರ್ಕದಲ್ಲಿ ಬಂದ ಮಹಿಳೆಯ ಜೊತೆ ದೂರವಾಣಿ ಸಂಭಾಷಣೆಯಲ್ಲಿ ಕೇಳಿದ್ದಾರೆ. ಕೊರೋನಾದಂತಹ ಮಹಾಮಾರಿ ಸಂದರ್ಭದಲ್ಲಿ ನಕಲಿ ಕೊರೋನಾ ಸಂಪರ್ಕಿತರ ಹೆಸರು ಕೊಡಿಸುವಂತೆ ಕೇಳಿದ್ದ ಕಿರಿಯ ಸಹಾಯಕ ರಾಜಶೇಖರ ಆಡಿಯೋ ಸಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ.