ಮದುಮಗನಿಗೂ ವಕ್ಕರಿಸಿದ ಕರೋನಾ ಮಹಾಮಾರಿ: ಸಂತಸದ ಮನೆಯಲ್ಲೀಗ ಕರಾಳ ಛಾಯೆ
ವಿಜಯಪುರ: ವಿವಾಹವಾಗಲು ಹೊರಟಿದ್ದ ಪೊಲೀಸ್ ಕಾನ್ಸಟೇಬಲ್ ಗೆ ಕೊರೋನಾ ವೈರಸ್ ತಗುಲಿದ ಪರಿಣಾಮ ಮದುಮಗ ಆಸ್ಪತ್ರೆ ಸೇರುವಂತಾಗಿದ್ದು, ಇಂದು ನಡೆಯಬೇಕಿದ್ದ ಮದುವೆ ರದ್ದಾಗಿದೆ.
P12140 ಎಂಬ 26 ವರ್ಷದ ಪೊಲೀಸ್ ಕಾನ್ಸಟೇಬಲ್ ನಲ್ಲಿ ಕರೋನಾ ಪತ್ತೆಯಾಗಿದ್ದು, ವಿಜಯಪುರದಲ್ಲಿ ನಡೆಯಬೇಕಿದ್ದ ಮದುವೆ ಮುಂದೂಡಿಕೆಯಾಗಿದೆ. ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಕಾನ್ಸಟೇಬಲ್ ನಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು.
ಆರೋಗ್ಯ ಇಲಾಖೆ ಸಿಬ್ಬಂದಿ ಕಲೆಕ್ಟ್ ಮಾಡಿ ಕಳುಹಿಸಿದ್ದ ಸ್ವ್ಯಾಬ್ ನ ವರದಿಯಲ್ಲಿ ಪಾಸಿಟಿವ್ ಬಂದಿದೆ. ಪೊಲೀಸನ ವರದಿ ಪಾಸಿಟಿವ್ ಹಿನ್ನೆಲೆ ಮದುವೆಯನ್ನು ಮುಂದೂಡುವಂತೆ ಕುಟುಂಬಸ್ಥರಿಗೆ ಜಿಲ್ಲಾಡಳಿತ ತಿಳಿಹೇಳಿದ್ದರಿಂದ ಮದುವೆಯನ್ನು ಕುಟುಂಬಸ್ಥರು ಮುಂದೂಡಿದ್ದಾರೆ.
ಮದುಮಗನಾಗಿದ್ದ ಪೊಲೀಸನ ಸಂಪರ್ಕಕ್ಕೆ ಬಂದ 30 ಜನ್ರ ಸ್ವ್ಯಾಬ್ ಕಲೆಕ್ಟ್ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಿದೆ. ಬೆಂಗಳೂರಿನ ಕಮಿಷನರೇಟ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸಟೇಬಲ್ ಮದುವೆ ಹಿನ್ನೆಲೆ ರಜೆ ಪಡೆದು ಊರಿಗೆ ಬಂದಿದ್ದ. ವಿಜಯಪುರಕ್ಕೆ ಬಂದ ಮೇಲೆ ಆತನಿಗೆ ಅನಾರೋಗ್ಯ ಕಾಡಿತ್ತು. ಲಕ್ಷಣಗಳು ಕಂಡು ಬಂದ ಹಿನ್ನೆಲೆ ಕೊರೋನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ.