ಕಲಾವಿದನ ‘ಕರೋನಾಟಕ’: ತಾನೂ ಮಾಡದ್ದನ್ನ ಮಂದಿಗೆ ಹೇಳಾಕ ಹೊಂಟಾನ್ರೀ..!

ಕೊರೋನಾ ಕಲಾವಿದ ಜನರ ಬಳಿ ಹೋಗಿ ಸಾಮಾಜಿಕ ಅಂತರವನ್ನ ಮರೆಯುತ್ತಿದ್ದಾರೆ. ಕಂಡ ಕಂಡವರನ್ನ ಹಿಡಿಯುವುದಕ್ಕೆ ಮುಂದಾಗುತ್ತಿದ್ದಾರೆ. ಇನ್ನೂ ಸೋಜಿಗವೆಂದ್ರೇ, ಕಲಾವಿದ ಮಾಸ್ಕ್ ಧರಿಸದೇ ಮಾಸ್ಕ್ ಬಗ್ಗೆ ಉಪದೇಶ ಮಾಡಹೊರಟಿದ್ದಾರೆ.. ಜೈ ಜಿಲ್ಲಾಡಳಿತ
ಹುಬ್ಬಳ್ಳಿ: ಅವಳಿನಗರದ ಹಲವೆಡೆ ಕೊರೋನಾ ವೈರಾಣು ವೇಷಧಾರಿಯೊಬ್ಬ ಕಾಣಿಸಿಕೊಳ್ಳುತ್ತಿದ್ದಾರೆ. ಜನರಿಗೆ ಭಾರೀ ಭಾರೀ ತಿಳುವಳಿಕೆ ಹೇಳುತ್ತಿದ್ದಾರೆ. ಸರಕಾರ ಜನರಿಗೆ ಏನೂ ಮಾಡ್ತಿದೆ ಎಂಬುದನ್ನ ಭಾಷಣ ಹೊಡೆಯುತ್ತಿದ್ದಾರೆ. ಆದರೆ, ತಾವೂ ಮಾತ್ರ ಬದನೆಕಾಯಿಯನ್ನ ತಿನ್ನುತ್ತಿದ್ದಾರೆ.
ಮಾಸ್ಕ್ ಧರಿಸದ ವ್ಯಕ್ತಿಗಳ ಬಳಿ ಹಠಾತ್ ತೆರಳುವ ಈ ಆಸಾಮಿ, ಕೋವಿಡ್ ತಪಾಸಣೆಗೆ ಒಳಪಡಿಸುವ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ಕೆ ಜೊತೆಯಾಗಿದ್ದು ಹಾಸ್ಯಾಸ್ಪದವಾಗಿತ್ತು.
ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಪಾಲನೆ ಅತ್ಯಗತ್ಯ. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ನಿರಂತರ ಪ್ರಯತ್ನ ಮಾಡುತ್ತಿವೆ. ಜಾಗೃತಿ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿಸಲು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಅವರ ಪರಿಕಲ್ಪನೆಯಲ್ಲಿ ಈ ಕಾರ್ಯ ಕೈಗೊಂಡಿದ್ದಾರೆ.
ಪ್ರತಿನಿತ್ಯ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೊರೋನಾ ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆ ವೇಳೆಯಲ್ಲಿ ಕಲಾವಿದರೊಬ್ಬರನ್ನು ಬಳಸಿಕೊಂಡು ಅವರಿಗೆ ಕೊರೋನಾ ವೈರಾಣು ವೇಷ ಹಾಕಿಸಿ, ಜನನೀಬಿಡ ಸ್ಥಳಗಳಲ್ಲಿ ಹಠಾತ್ ಕಳಿಸಿ, ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಕರೆತರುವ ಕಾರ್ಯಾಚರಣೆ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ.
ನಾದಝೇಂಕಾರ ಸಂಸ್ಥೆಯ ಯಮನಪ್ಪ ಜಾಲಗಾರ ಅವರ ನೇತೃತ್ವದಲ್ಲಿ ಕಲಾವಿದ ಬಸವರಾಜ ಗುಡ್ಡಪ್ಪನವರ ಕೊರೋನಾ ವೇಷ ಧರಿಸಿದ್ದರು. ಕಲಾವಿದೆ ಮುಕ್ತಾ ವರ್ಣೇಕರ್ ಕೊರೋನಾ ವೇಷ ಭೂಷಣ ಸಿದ್ಧಪಡಿಸಿದ್ದಾರೆ. ಕಲಾವಿದ ಸಂತೋಷ ಮಹಾಲೆ ಪ್ರಸಾದನ ನಿರ್ವಹಿಸಿದ್ದಾರೆ ಎಂಬುದು ಕೇವಲ ಪ್ರಸ್ತುವಷ್ಟೇ.