ಕೊರೋನಾದಿಂದ ಇಬ್ಬರು ಶಿಕ್ಷಕರ ಸಾವು: ತತ್ತರಿಸಿದ ಶಿಕ್ಷಣ ಇಲಾಖೆ
ಧಾರವಾಡ: ಶಿಕ್ಷಣ ಇಲಾಖೆಯಲ್ಲಿ ಕೊರೋನಾ ಪಾಸಿಟಿವ್ ನಿಂದ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಶಿಕ್ಷಕ ಸಮೂಹ ಆತಂಕದಲ್ಲಿ ದಿನಗಳನ್ನ ಕಳೆಯುವಂತಾಗಿದೆ. ನಿನ್ನೆಯಷ್ಟೇ ನರಗುಂದ ತಾಲೂಕಿನ ಕೊಣ್ಣೂರ ಶಾಲೆಯ ಶಿಕ್ಷಕಿಯೋರ್ವರು ತೀರಿಕೊಂಡಿದ್ದನ್ನ ನೋಡಿದ ನಮಗೆ, ಈಗ ಮತ್ತೆ ಇಬ್ಬರು ಶಿಕ್ಷಕರು ಸಾವಿಗೀಡಾದ ಮಾಹಿತಿ ದೊರಕಿದೆ.
ಹುಬ್ಬಳ್ಳಿ ಸಿದ್ಧಾರೂಢನಗರದ ನಿವಾಸಿಯಾಗಿದ್ದ ಸತೀಶಕುಮಾರ ನೀಲಣ್ಣನವರ, ಕಳೆದ ಹತ್ತು ವರ್ಷದಿಂದ ವಿದ್ಯಾನಗರದ ನೇಕಾರ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಇತ್ತೀಚೆಗೆ ಸೇವಾ ಹಿರಿತನದ ಮೇಲೆ ಪದೋನ್ನತಿ ಹೊಂದಿ ಕಾಮಧೇನು ಶಾಲೆಯನ್ನ ಆಯ್ಕೆ ಮಾಡಿಕೊಂಡಿದ್ದರು. ಅಷ್ಟರಲ್ಲೇ ನಿಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಎರಡು ಮಕ್ಕಳನ್ನ ಹೊಂದಿದ್ದ ಸತೀಶಕುಮಾರವರ ಪತ್ನಿಯೂ ಕೂಡಾ ಹುಬ್ಬಳ್ಳಿಯ ಛಬ್ಬಿ ಪ್ಲಾಟ್ ನ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
ನವನಗರದ ಬೆಥಲ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಜಾವೇದ್ ಕೂಡಾ ಕೊರೋನಾ ಪಾಸಿಟಿವ್ ಬಂದು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಶಿಕ್ಷಕ ಸಮೂಹದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ. ಅಷ್ಟೇ ಅಲ್ಲ, ಕೆಲವರು ಪ್ರಕರಣದಿಂದ ಸಾವಿಗೀಡಾಗುತ್ತಿದ್ದಾರೆ. ಇದು ಕೂಡಾ ಮತ್ತಷ್ಟು ಆತಂಕವನ್ನ ಸೃಷ್ಟಿಸಿದೆ.
ಮೃತರಿಬ್ಬರ ಸಾವಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ಸಂತಾಪ ಸೂಚಿಸಿದೆ.