ಕುಂದಗೋಳದ ಚಿಕ್ಕಗುಂಜಳದಲ್ಲಿ ಒಂದೇ ಮನೆಯ ನಾಲ್ವರನ್ನ ಬಲಿ ಪಡೆದ ಕೊರೋನಾ…!
1 min readಹುಬ್ಬಳ್ಳಿ: ಕಳೆದ ಹತ್ತು ಹದಿನೈದು ದಿನಗಳಲ್ಲಿ ಒಂದೇ ಕುಟುಂಬದ ನಾಲ್ವರು ಕೊರೋನಾಕ್ಕೆ ಬಲಿಯಾಗಿದ್ದು, ಇಡೀ ಕುಟುಂಬವೇ ದುಃಖದಲ್ಲಿ ಮುಳುಗಿರುವಂತಹ ಘಟನೆ ಕುಂದಗೋಳ ತಾಲೂಕಿನ ಚಿಕ್ಕಗುಂಜಳ ಗ್ರಾಮದಲ್ಲಿ ನಡೆದಿದೆ.
ಹಿರೇತನದ ಎಂಬುವವರ ಮನೆಯಲ್ಲಿನ ತಾಯಿ, ಮೂವರು ಮಕ್ಕಳು ಕೊರೋನಾಕ್ಕೆ ಬಲಿಯಾಗಿದ್ದಾರೆ. ತಂದೆ ಆಸ್ಪತ್ರೆಯಲ್ಲಿದ್ದಾರೆ.
ಹೇಗೆ ಬಂತು..
ಈ ಮನೆಯ ಹಿರಿಯ ಸದಸ್ಯರಾದ 80 ವರ್ಷದ ನಿವೃತ್ತ ಶಿಕ್ಷಕರಿಗೆ ಕೊರೋನಾ ಕಾಣಿಸಿಕೊಂಡಿತ್ತು. ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರನ್ನು ಆರೈಕೆ ಮಾಡುತ್ತಿದ್ದರಿಂದ ಪತ್ನಿ ಶಾಂತಮ್ಮ (75) ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ಎರಡು ದಿನಗಳಲ್ಲಿ ದೊಡ್ಡ ಮಗ ಮಂಜುನಾಥನಿಗೂ ಕೊರೋನಾ ದೃಢಪಟ್ಟಿದೆ. ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅದೇ ರೀತಿ ಎರಡನೆಯ ಮಗ ಅರವಿಂದ ಹಾಗೂ ಮೂರನೆಯ ಮಗ ಸುರೇಶ ಎಂಬುವವರೆಗೂ ಕೊರೋನಾ ಕಾಣಿಸಿಕೊಂಡಿದೆ. ಮೊನ್ನೆ ಅರವಿಂದ, ಇವತ್ತು ಸುರೇಶ ಸಾವಿಗೀಡಾಗಿದ್ದಾರೆ. ಹೀಗೆ 10-15 ದಿನಗಳಲ್ಲಿ ತಾಯಿ ಹಾಗೂ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯ ಮೂವರು ಗಂಡು ಮಕ್ಕಳು ಮೃತಪಟ್ಟಂತಾಗಿದೆ. ಮನೆಯಲ್ಲಿನ ಮೂವರು ಪುರುಷರು ಮೃತಪಟ್ಟಿರುವುದರಿಂದ ದಿಕ್ಕೆ ತೋಚದಂತಾಗಿದೆ ಎಂದು ಕುಟುಂಬದ ಸದಸ್ಯರು ಕಣ್ಣೀರು ಸುರಿಸುತ್ತಿದ್ದಾರೆ. ಸಾಂತ್ವನ ಹೇಳಲು ಕೂಡ ಯಾರು ಇವರ ಮನೆಯತ್ತ ಹೋಗದಿರುವುದು ಇವರ ಕಣ್ಣೀರು ಅರಣ್ಯ ರೋಧನದಂತಾಗಿದೆ.