ಗದಗ ಕಾಂಗ್ರೆಸ್ ಮುಖಂಡನ ಮಗ ದರೋಡೆ ಪ್ರಕರಣದಲ್ಲಿ ಬಂಧನ
ವಿರಾಜಪೇಟೆ: ದರೋಡೆಗೆ ಹೊಂಚು ಹಾಕುತ್ತಿದ್ದ ಕೋರೋನಾ ಪೀಡಿತನೋರ್ವ ಸೇರಿದಂತೆ ಒಟ್ಟು 9 ಮಂದಿ ದರೋಡೆಕೋರರಿದ್ದ ತಂಡವನ್ನು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ವೀರಾಜಪೇಟೆ ನಗರ ಪೋಲೀಸರು ಯಶಸ್ವಿಯಾಗಿದ್ದಾರೆ.
ಶನಿವಾರ ಬೆಳಗ್ಗೆ 5 ಗಂಟೆ ಸಮಯದಲ್ಲಿ ದೊರೆತ ಖಚಿತ ಮಾಹಿತಿ ಯ ಮೇರೆಗೆ ವೀರಾಜಪೇಟೆ ನಗರ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬೋಜಪ್ಪ ಹಾಗೂ ಪೋಲೀಸ್ ಸಿಬ್ಬಂದಿಗಳು ವೀರಾಜಪೇಟೆ ಕೇರಳ ರಸ್ತೆಯ ಲಕ್ಷ್ಮಿ ಹೊಟೇಲನತ್ತ ದೌಡಾಯಿಸಿದ್ದಾರೆ. ರಸ್ತೆ ಬದಿಯಲ್ಲಿ ಎರಡು ಕಾರುಗಳನ್ನು ನಿಲ್ಲಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದವರು ಪೋಲೀಸ್ ವಾಹನವನ್ನು ಕಂಡು ತರಾತುರಿಯಲ್ಲಿ ಪಲಾಯನಗೈಯಲು ಮುಂದಾಗಿದ್ದಾರೆ.
ಕಾರುಗಳನ್ನು ಬೆನ್ನಟ್ಟಿದ ಪೋಲೀಸರು, 9 ಮಂದಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲೆಂದು ಇರಿಸಿದ್ದ ಮೂರು ಕಬ್ಬಿಣದ ರಾಡು, ತಲಾ ಒಂದು ಚಾಕು ಮತ್ತು ಲಾಂಗ್ ಮಚ್ಚು, ಎರಡು ತಲ್ವಾರ್, ಖಾರದ ಪುಡಿ, ಸುಮಾರು ಎಂಟು ಕೆ.ಜಿ. ಯಷ್ಟು ಪಾದರಸ ಹಾಗೂ ಎರಡು ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂದಿತರನ್ನು ವೀರಾಜಪೇಟೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ 15 ದಿನಗಳ ಕಾಲ ನ್ಯಾಯಾಂಗ ವಶಕ್ಕೊಳಪಡಿಸಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಗದಗ ಪಟ್ಟಣದ ಪಂಚಾಕ್ಷರಿನಗರದ ಕಾಂಗ್ರೆಸ್ ಮುಖಂಡ ದಿರೇಂದ್ರ ಹುಯಿಲಗೋಳ ಪುತ್ರ ವಾದಿರಾಜನಾಗಿದ್ದು, ಈತ ಹಾಲಿ ಮೈಸೂರಿನಲ್ಲಿ ವಾಸವಾಗಿದ್ದಾನೆಂದು ಪೊಲೀಸ್ ಮಾಹಿತಿ ತಿಳಿಸಿದೆ.
ಬಂಧಿತ ಆರೋಪಿಗಳ ಪೈಕಿ ಓರ್ವನಿಗೆ ಕೋರೋನಾ ಸೋಂಕು ದೃಢಪಟ್ಟಿರುವುದರಿಂದ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನುಳಿದ 8 ಮಂದಿಯನ್ನು ಮಡಿಕೇರಿ ಕಾರಾಗೃಹಕ್ಕೆ ಅಟ್ಟಲಾಗಿದೆ. ಈ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಬೋಜಪ್ಪರವರೊಂದಿಗೆ ಎನ್.ಸಿ. ಲೋಕೇಶ್, ಮುಸ್ತಫಾ, ಸಂತೋಷ್, ಗೀರಿಶ, ಮಧು, ಮುನಿರ್, ರಜನ್, ಲೋಹಿತ್, ಮಲ್ಲಿಕಾರ್ಜುನ, ಚಾಲಕ ಯೋಗೇಶ್ ಇವರುಗಳು ಭಾಗವಹಿಸಿದ್ದರು. _ವೀರಾಜಪೇಟೆ ನಗರ ಪೋಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ದರೋಡೆಕೋರರು ನಡೆಸಬಹುದಾಗಿದ್ದ ದರೋಡೆ ಯತ್ನ ವಿಫಲವಾಗಿದೆ ಎನ್ನಲಾಗಿದೆ. ವಾದಿರಾಜ ದಿರೇಂದ್ರ ಹುಯಿಲಗೋಳ