Posts Slider

Karnataka Voice

Latest Kannada News

ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಿ: ನಾಮ ನಿರ್ದೇಶನ ಮಾಡಿಸಬೇಡಿ: ಕಾಂಗ್ರೆಸ್ ನಿಯೋಗದಿಂದ ಆಯೋಗಕ್ಕೆ ಮನವಿ

Spread the love

ಬೆಂಗಳೂರು: ಅವಧಿ ಪೂರ್ಣಗೊಳ್ಳುವ ಗ್ರಾಮ ಪಂಚಾಯಿತಿಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಅವಕಾಶ ನೀಡದಂತೆ ಹಾಗೂ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸಚಿವ ಎಚ್.ಕೆ ಪಾಟೀಲ್ ಮತ್ತಿತರರು ಹಾಜರಿದ್ದರು.

ಕಾಂಗ್ರೆಸ್ ಮುಖಂಡರ ನಿಯೋಗ ರಾಜ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಿದ ಮನವಿಯ ಮುಖ್ಯಾಂಶಗಳು:- ಸಂವಿಧಾನದ 243ಇ ವಿಧಿಯಂತೆ  ಗ್ರಾಮ ಪಂಚಾಯತಿಯೊಂದು  ಮೊದಲ  ಸಭೆ ನಡೆಸಿದ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಅಧಿಕಾರ ಹೊಂದಿರುತ್ತದೆ. ಅದರಂತೆ 2015 ನೇ ಇಸವಿಯಲ್ಲಿ  ನಮ್ಮ ರಾಜ್ಯದ 6024 ಗ್ರಾಮ ಪಂಚಾಯತಿಗಳ ಸದಸ್ಯರ ಸ್ಥಾನಗಳಿಗಾಗಿ ಚುನಾವಣೆಯು  ನಡೆದಿರುತ್ತದೆ. ಬಹುಪಾಲು ಗ್ರಾಮ ಪಂಚಾಯತಿಗಳ ಅಧಿಕಾರಾದ ಅವಧಿಯು ಇದೇ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತದೆ.

ಹೀಗೆ ಗ್ರಾಮ ಪಂಚಾಯತಿಗಳ ಅಧಿಕಾರಾವಧಿಯು ಮುಕ್ತಾಯಗೊಳ್ಳುತ್ತಿದ್ದರೂ ಸಹ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಕ್ರಿಯೆಯನ್ನು ಭಾರತೀಯ ಸಂವಿಧಾನ 1950 ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾಯ್ದೆ 1993 ರ ಆಶಯದಂತೆ ಆರಂಭಿಸಿಲ್ಲದಿರುವುದು ಸಂವಿಧಾನ ವಿರೋಧಿಯಾದ ನಡೆಯಾಗಿರುತ್ತದೆ.

ರಾಜ್ಯ ಚುನಾವಣಾ ಆಯೋಗವು ರಾಜ್ಯದ ಗ್ರಾಮ ಪಂಚಾಯತಿಗಳಿಗೆ ನಿಗಧಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸದೆ ಇರುವುದರಿಂದ ಗ್ರಾಮಗಳ ವಿಕೇಂದ್ರೀಕೃತ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯನ್ನು ದಮನ ಮಾಡಿದಂತಾಗುತ್ತದೆ. ಇದರಿಂದ ಸಂವಿಧಾನದ 73 ನೇ ತಿದ್ದುಪಡಿಯ ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ.

ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ,1993 ರ ಸೆಕ್ಷನ್ 308ಎಎ ಪ್ರಕಾರ ರಾಜ್ಯ ಚುನಾವಣಾ ಆಯೋಗವು ಪಂಚಾಯತಿಗಳ ಹಾಲಿ ಅಧಿಕಾರಾವಧಿ ಮುಗಿಯುವ ಮೊದಲೆ ಚುನಾವಣಾ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಬೇಕಾಗಿದೆ. ಇದಕ್ಕಾಗಿ ಚುನಾವಣಾ ವೇಳಾಪಟ್ಟಿ ಮತ್ತು ಮೀಸಲಾತಿಗಳ ವಿವರಗಳನ್ನು ಚುನಾವಣೆಗಳ ಅಧಿಸೂಚನೆ ಹೊರಡಿಸುವ 45 ದಿನಗಳ ಮೊದಲೇ ಹೊರಡಿಸಬೇಕಾಗುತ್ತದೆ.

ಆದರೆ ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಅಧಿಕಾರಾವಧಿ ಮುಗಿದು ಹೋಗುತ್ತಿದ್ದರೂ ಕೂಡ ರಾಜ್ಯ ಚುನಾವಣಾ ಆಯೋಗವು ಮೀಸಲಾತಿಯ ನಿಗಧಿ, ವೇಳಾಪಟ್ಟಿಗಳ ಪ್ರಕಟ ಮುಂತಾದ ಯಾವುದೇ ಚುನಾವಣಾ ಪ್ರಕ್ರಿಯೆಗಳನ್ನು ಪ್ರಾರಂಭಿಸಿರುವ ಕುರಿತು ಯಾವ ಮಾಹಿತಿಯೂ ಇಲ್ಲ. ಸೂಚನೆಯೂ ಇಲ್ಲ. ಇದರಿಂದಾಗಿ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 308ಎಎ ಅನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘನೆ ಮಾಡಿದೆ ಮತ್ತು ಕಾಯ್ದೆಯ ಕುರಿತು ಸಂಪೂರ್ಣ ನಿರ್ಲಕ್ಷ್ಯ ತೋರಿದೆ.

ಭಾರತದ ಸಂವಿಧಾನದ ಅನುಚ್ಛೇದ 243ಇ[3] ರ ಅನ್ವಯ ಯಾವುದೇ ಪಂಚಾಯತಿಯ ಐದು ವರ್ಷಗಳ ಅದಿಕಾರಾವಧಿ ಮುಕ್ತಾಯಗೊಳ್ಳುವ ಮೊದಲೇ ಚುನಾವಣೆಗಳನ್ನು ನಡೆಸಬೇಕೆಂಬ ಸ್ಪಷ್ಟ ನಿರ್ದೇಶನವಿದೆ. ಆದ ಕಾರಣ ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಕಡ್ಡಾಯ ಕರ್ತವ್ಯವಾಗಿರುತ್ತದೆ.

ಭಾರತದ ಸಂವಿಧಾನದ ಅನುಚ್ಛೇದ 243ಇ[3] ರ ಅನ್ವಯ ಯಾವುದೇ ಪಂಚಾಯತಿಯ ಐದು ವರ್ಷಗಳ ಅದಿಕಾರಾವಧಿ ಮುಕ್ತಾಯಗೊಳ್ಳುವ ಮೊದಲೇ ಚುನಾವಣೆಗಳನ್ನು ನಡೆಸಬೇಕೆಂಬ ಸ್ಪಷ್ಟ ನಿರ್ದೇಶನವಿದೆ. ಆದ ಕಾರಣ ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಕಡ್ಡಾಯ ಕರ್ತವ್ಯವಾಗಿರುತ್ತದೆ.

ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ,1993 ರ ನಿಯಮ 8 ರಂತೆ ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯತುಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗದಿದ್ದಾಗ ಮತ್ತು ಎರಡು ಬಾರಿ  ನಿರಂತರವಾಗಿ ಚುನಾವಣೆ ನಡೆಸಿದರೂ ಸದಸ್ಯರು ಆಯ್ಕೆಯಾಗದಿದ್ದಾಗ  ಅಥವಾ ಇನ್ನಾವುದೇ ಸಮರ್ಥನೀಯವಾದ ಸ್ಪಷ್ಟ ಕಾರಣಗಳಿದ್ದರೆ ಮಾತ್ರ ಆಡಳಿತ ಸಮಿತಿಯನ್ನು ಅಧಿಸೂಚನೆ ಹೊರಡಿಸುವುದರ ಮೂಲಕ ರಚಿಸಬಹುದಾಗಿದೆ.

ಗ್ರಾಮ ಪಂಚಾಯತಿಗಳಿಗೆ ಸದಸ್ಯರನ್ನು ಚುನಾಯಿಸುವುದು ಅಸಾಧ್ಯವಾದಾಗ ಅಥವಾ ನಿರಂತರವಾಗಿ ಎರಡು ಚುನಾವಣೆಗಳನ್ನು ನಡೆಸಿದರೂ ಸದಸ್ಯರನ್ನು ಆಯ್ಕೆ ಮಾಡಲು ಸಾಧ್ಯವಾಗದಿದ್ದಾಗ ರಾಜ್ಯ ಸರ್ಕಾರವು ಆಡಳಿತ ಸಮಿತಿಯನ್ನು ನೇಮಿಸಬಹುದಾಗಿದೆ. ಪ್ರಸ್ತುತ ಇಂಥಹ ಯಾವುದೇ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವವಾಗಿಲ್ಲ. ಹಾಗಾಗಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 8 ರಂತೆ ಆಡಳಿತ ಸಮಿತಿಗಳನ್ನು ರಚಿಸಲು ಅವಕಾಶವಿಲ್ಲ.

ರಾಜ್ಯ ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಜವಾಬ್ಧಾರಿಯನ್ನು ನ್ಯಾಯಬದ್ಧವಾಗಿ, ಪಕ್ಷಪಾತರಹಿತವಾಗಿ ರಾಷ್ಟ್ರದ ಸಂವಿಧಾನ ಹಾಗೂ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರಂತೆ ನೈಜ ಸ್ಫೂರ್ತಿಯಿಂದ ವರ್ತಿಸಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸುತ್ತೇವೆ.


Spread the love

Leave a Reply

Your email address will not be published. Required fields are marked *

You may have missed