100 ಕೋವಿಡ್ ಸೋಂಕಿತರಿಗೆ ಓರ್ವ ಡಾಕ್ಟರ್ ಇಬ್ಬರು ನರ್ಸ್: ಸಿಎಂ ಬಿಎಸ್ ಯಡಿಯೂರಪ್ಪ
ಬೆಂಗಳೂರು: ಬೆಂಗಳೂರಲ್ಲಿ ಹೆಚ್ಚುತ್ತಿರುವ ಸೊಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಈ ಕೋವಿಡ್ ಕೇರ್ ಸೆಂಟರನಲ್ಲಿ 10,100 ಜನ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಇಲ್ಲಿ ಎಲ್ಲಾ ವ್ಯವಸ್ಥೆಯನ್ನ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಕೋವಿಡ್ ಕೇರ್ ಸೆಂಟರ್ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಸಿಎಂ, ಕೇಂದ್ರ ತಂಡ ಸಹ ಇಲ್ಲಿಗೆ ಭೇಟಿ ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿ ತೆರಳಿದ್ದಾರೆ. ಇನ್ನೂ ಒಂದು ವಾರದಲ್ಲಿ ಈ ಕೋವಿಡ್ ಕೇರ್ ಸೆಂಟರ್ ಆರಂಭವಾಗಲಿದೆ. ಜನತೆ ವಿಶ್ವಾಸವನ್ನ ಕಳೆದುಕೊಳ್ಳಬಾರದು. ಸರ್ಕಾರದ ಜೊತೆ ಕೈಜೊಡಿಸಿ ಎಂದು ಮನವಿ ಮಾಡಿಕೊಂಡರು.
ಮತ್ತೆ ಬೆಂಗಳೂರು ಬಿಟ್ಟು ಹೋಗದಂತೆ ಜನರಲ್ಲಿ ಮನವಿ ಮಾಡಿದ ಸಿಎಂ, 2200 ಸಿಬ್ಬಂದಿಗಳನ್ನ ಇಲ್ಲಿ ನೇಮಿಸಲಾಗಿದೆ. ಈ ಕೋವಿಡ್ ಕೇರ್ ಸೆಂಟರನಲ್ಲಿ ಐಸಿಯೂ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಸಮೀಪದ ಆಸ್ಪತ್ರೆಗಳ ಜೊತೆ ಸಂಯೋಜನೆ ಮಾಡಿಕೊಳ್ಳಲಾಗಿದೆ. 100 ಕೋವಿಡ್ ಸೋಂಕಿತರಿಗೆ ಒಬ್ಬ ಡಾಕ್ಟರ್ ಇಬ್ಬರು ನರ್ಸ್. ಕೋವಿಡ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಹಣದ ಕೊರತೆ ಇಲ್ಲ ಎಂದರು.
ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡಬಾರದು. ಇದ್ರ ಬಗ್ಗೆ ಸಚಿವರು ಸಭೆ ನಡೆಸಿ ಅವರ ಜೊತೆ ಮಾತನಾಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಅವರ ಸಹ ಸುಲಿಗೆಯನ್ನ ಮಾಡಬಾರದು. ಸುಲಿಗೆ ಮಾಡಿದ್ರೆ ಅವರ ಮೇಲೆ ಕ್ರಮ ಅನಿವಾರ್ಯ. ಎಲ್ಲಾ ಶಾಸಕರು ಕ್ಷೇತ್ರದ ಕೋವಿಡ್ ಸೆಂಟರ್ ಗೆ ಭೇಟಿನೀಡಿ ಅಲ್ಲಿನ ಸಮಸ್ಯೆ ಬಗೆಹರಿಸಿ. ಆಂಬುಲೆನ್ಸ್ ವಿಳಂಬವಾದಲ್ಲಿ ಗಮನಕ್ಕೆ ತರಬಹುದು. ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ. ಸಚಿವರು ತಮ್ಮ ಕ್ಷೇತ್ರಗಳಲ್ಲಿ ಗಮನ ಹರಿಸಿ. ಸೋಂಕು ತಡೆಯಲು ಕೆಲಸ ಮಾಡಿ ಎಂದು ಕರೆ ನೀಡಿದರು.