ಸಿಎಂ ಸ್ಥಾನವನ್ನ ಪಂಚಮಸಾಲಿ ಸಮುದಾಯಕ್ಕೆ ನೀಡಿ: ಸ್ವಾಮೀಜಿಗಳ ಆಗ್ರಹ
1 min readಬೆಂಗಳೂರು: ಪಂಚಮಶಾಲಿ ಸಮುದಾಯದ ಶೇಕಡಾ 70%ರಷ್ಟು ಜನ ಬಿಜೆಪಿಯನ್ನ ಬೆಂಬಲಿಸಿಕೊಂಡು ಬರ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಅವಧಿ ಮುಗಿದ ಬಳಿಕ ಸಿಎಂ ಸ್ಥಾನವನ್ನು ಪಂಚಮಶಾಲಿ ಸಮುದಾಯಕ್ಕೆ ನೀಡಬೇಕು ಎಂದು ಕೂಡಲಸಂಗಮ ಪಂಚಮಶಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಸಚಿವ ಸ್ಥಾನ ಕೇಳುವುದಕ್ಕಿಂತ ಮುಂದೆ ಸಿಎಂ ಸ್ಥಾನವನ್ನೇ ಕೊಡಲಿ. ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಆಗ ಕೊಡದಿದ್ದು ನಮಗೆ ಅಸಮಾಧಾನ ಇದೆ. ನಮ್ಮ ಸಮುದಾಯದ ಶಾಸಕರ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಮೂವರು ಶಾಸಕರನ್ನಾದ್ರೂ ಸಚಿವರನ್ನಾಗಿ ಮಾಡಬೇಕಿತ್ತು, ಮಾಡಲಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಯಡಿಯೂರಪ್ಪ ಅವಧಿ ಮೂರು ವರ್ಷ ಇರುತ್ತೋ….? ಇಲ್ಲ, ಮುಂದೆಯೂ ಅವರೇ ಆಗ್ತಾರೋ ಗೊತ್ತಿಲ್ಲ. ಅವರ ಅವಧಿ ಮುಗಿದ ಬಳಿಕ ನಮ್ಮ ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ಕೊಡಿ. ನಮ್ಮಲ್ಲೂ ಅನೇಕರು ಅರ್ಹತೆ ಇರೋರು ಇದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ ಎಂಬುದನ್ನ ಹೇಳಿಕೆಯಲ್ಲಿ ಸೇರಿಸಿದರು.
ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮಾಜ ದೊಡ್ಡ ಸಮಾಜ. ಕರ್ನಾಟಕ ಜಾತಿಪಟ್ಟಿಯಲ್ಲಿ ಪಂಚಮಸಾಲಿ ಸಮುದಾಯದ ಪ್ರಸ್ತಾಪ ಇಲ್ಲ. ಕೃಷಿ ಆಧಾರಿತ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಸಿಗ್ತಿಲ್ಲ. ಸಿಎಂ ಆಗಿದ್ದ ವೀರಪ್ಪ ಮೊಯಿಲಿ ಅವರಿಗೆ ಮೀಸಲಾತಿಗಾಗಿ ಮನವಿ ಸಲ್ಲಿಸಲಾಯಿತು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಅಂತ ಮನವಿ ಕೊಡಲಾಗಿತ್ತಾದರೂ ಇಲ್ಲಿಯವರೆಗೆ ಪ್ರಯೋಜನವಾಗಿಲ್ಲ.
ಪಂಚಮಸಾಲಿ ಸಮಾಜದ 16 ಶಾಸಕರು, 3 ಸಂಸದರು ಇದ್ದಾರೆ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು ಅಂತ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ. ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರದ ಪ್ರವರ್ಗ 2ಎಗೆ ಸೇರ್ಪಡೆ ಮಾಡಬೆಕು. ಕೇಂದ್ರ ಸರ್ಕಾರದ OBC ಪಟ್ಟಿಯಲ್ಲಿ ಪಂಚಮಸಾಲಿ ಸಮಾಜವನ್ನು ಸೇರಿಸಬೇಕು. ಪ್ರವರ್ಗ 3ಬಿ ನಲ್ಲಿರುವ ನಮ್ಮ ಸಮಾಜಕ್ಕೆ ಈಗ ಪ್ರತ್ಯೇಕ ಮೀಸಲಾತಿ ಅಗತ್ಯವಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಪ್ರವರ್ಗ ೨ ಎ ಮೀಸಲಾತಿ ಬೇಕಾಗಿದೆ. ಅದಕ್ಕಾಗಿ ಹೋರಾಟ ಮಾಡಲು ತಿರ್ಮಾನ ಮಾಡಲಾಗಿದೆ. ಅಕ್ಟೋಬರ್ 28ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದೆಂದು ಜಯಮೃತ್ಯುಂಜಯ ಸ್ವಾಮೀಜಿ ಗಳು ಹೇಳಿದರು.