Posts Slider

Karnataka Voice

Latest Kannada News

ಡಾ. ಬಾಬು ಜಗಜೀವನರಾಂ ವ್ಯಕ್ತಿತ್ವ, ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸಲು ಸಿಎಂ ಕರೆ

1 min read
Spread the love

ಬೆಂಗಳೂರು:  ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪಪ್ರಧಾನಮಂತ್ರಿಗಳಾದ ಡಾ.ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.

ವಿಧಾನಸೌಧದ ಆವರಣದಲ್ಲಿಂದು ಡಾ. ಬಾಬುಜಗಜೀವನರಾಂ ಅವರ ಪುಣ್ಯಸ್ಮರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದ ನಂತರ ಮಾತನಾಡಿದ ಅವರು,  ಶೋಷಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ನಾಯಕರಾದ ಡಾ. ಬಾಬುಜಗಜೀವನರಾಂ ಅವರು ಶೋಷಿತರ ಆಶಾಕಿರಣರಾಗಿದ್ದಾರೆ. ನಾಲ್ಕು ದಶಕಗಳ ಕಾಲ ಸಂಸತ್ ಸದಸ್ಯರಾಗಿ  ಅಪರಿಮಿತವಾಗಿ ಸೇವೆ ಸಲ್ಲಿಸಿದ್ದಾರೆ.  ರಾಜ್ಯದ, ರಾಷ್ಟ್ರದ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಅವರು  ನೀಡಿದ ಕೊಡುಗೆ ಅಪಾರವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಆಹಾರ ಕೊರತೆ ಎದುರಾದಾಗ ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅಳವಡಿಸಿಕೊಂಡು ಪರಿಸ್ಥಿತಿಯನ್ನು  ಸಮರ್ಥವಾಗಿ ಎದುರಿಸಿ, ಹಸಿರುಕ್ರಾಂತಿಯ ಹರಿಕಾರ ಎಂದೇ ಖ್ಯಾತಿಯಾಗಿದ್ದಾರೆ. ರಕ್ಷಣಾ ಸಚಿವರಾಗಿ ಗುರುತರವಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರದ ಬೆನ್ನೆಲುಬು ರೈತ ಹಾಗೂ ಯೋಧ ಈ ಎರಡೂ ಸಮುದಾಯಕ್ಕೆ ಡಾ. ಬಾಬು ಜಗಜೀವನ ರಾಂ ಅವರ ಮಾರ್ಗದರ್ಶನ ಹಾಗೂ ನಾಯಕತ್ವ  ಉಲ್ಲೇಖನಾರ್ಹವಾಗಿದೆ. ಅವರ ಸಾಮಾಜಿಕ ಕಳಕಳಿ ಹಾಗೂ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಗೃಹಸಚಿವ ಬಸವರಾಜ ಬೊಮ್ಮಾಯಿ, ಸಂಸದ ನಾರಾಯಣಸ್ವಾಮಿ, ಮಾಜಿ ಸಚಿವ ಆಂಜನೇಯ ಮಾಲಾರ್ಪಣೆ ಸಲ್ಲಿಸಿದರು. ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಬಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಆಯುಕ್ತ ರವಿಕುಮಾರ್ ಸುರಪುರ್, ಸಲಹೆಗಾರ ಇ. ವೆಂಕಟಯ್ಯ, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ  ಅಪರ ನಿರ್ದೇಶಕ ನಾಗೇಶ್, ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕ  ನಟರಾಜ್, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ  ನಿರ್ದೇಶಕ ಹನುಮನರಸಯ್ಯ, ವಿವಿಧ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed