Posts Slider

Karnataka Voice

Latest Kannada News

ಸಿಇಟಿ ಪರೀಕ್ಷೆ ನಡೆಯೋದಿಲ್ವಾ…? ಸರಕಾರ ನಾಳೆ ಮಧ್ಯಾಹ್ನ ಕೊಡಲಿದೆ ಉತ್ತರ..!

Spread the love

ಬೆಂಗಳೂರು: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಸಿಇಟಿ ಪರೀಕ್ಷೆಯನ್ನು ನಡೆಸುವ ಸಂಬಂಧ ಕೈಗೊಂಡಿರುವ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದ ತಕ್ಷಣವೇ, ಉನ್ನತ ಮಟ್ಟದ ತುರ್ತುಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮುಂದಿನ ನಡೆಯ ಬಗ್ಗೆ ಸಮಾಲೋಚಿಸಿದರು. ಅಲ್ಲದೆ, ಪರೀಕ್ಷೆ ನಡೆಸಲು ಯಾವುದೇ ಸಮಸ್ಯೆ ಇಲ್ಲ ಎಂಬ ಅಭಿಪ್ರಾಯವೂ ಈ ಸಭೆಯಲ್ಲಿ ವ್ಯಕ್ತವಾಯಿತು.
ಈ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಸಾರಿಗೆ, ಆರೋಗ್ಯ, ಮತ್ತಿತರೆ ಇಲಾಖೆಗಳ ಉನ್ನತ ಅಧಿಕಾರಿಗಳ ಜತೆ ಡಿಸಿಎಂ ಮಹತ್ವದ ವಿಡಿಯೋ ಸಂವಾದ ನಡೆಸಿದರಲ್ಲದೆ, ಪರೀಕ್ಷೆಯ ಬಗ್ಗೆ ಎಲ್ಲರ ಅಭಿಪ್ರಾಯವನ್ನು ಸವಿವರವಾಗಿ ಸಂಗ್ರಹ ಮಾಡಿದರು.

ನ್ಯಾಯಾಲಯ ಹೇಳಿದ್ದೇನು…?

ಜುಲೈ 30-31 ಹಾಗೂ ಅಗಸ್ಟ್ 1ರಂದು ಸಿಇಟಿ ಪರೀಕ್ಷೆ ನಿಗದಿಯಾಗಿದೆ. ಆದರೆ ಕೋವಿಡ್’ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಕಂಟೈನ್ಮೆಂಟ್ ಜೋನ್’ಗಳಲ್ಲಿರುವ ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಬರುವ ಹಾಗಿಲ್ಲ. ಜತೆಗೆ ಹೊರ ರಾಜ್ಯಗಳಿಂದ ಅನೇಕ ವಿದ್ಯಾರ್ಥಿಗಳು ರಾಜ್ಯಕ್ಕೆ ಬಂದು ಪರೀಕ್ಷೆ ಬರೆಯಲಿದ್ದಾರೆ. ಕೋವಿಡ್-19 ಎಸ್ಓಪಿಯ ಅನುಸಾರ ಕಂಟೈನ್ಮೆಂಟ್ ಜೋನ್’ನಲ್ಲಿ ಇರುವವರು ಹೊರಗೆ ಹೋಗುವಂತಿಲ್ಲ. ಬೆಂಗಳೂರಿನಲ್ಲೇ ಹೆಚ್ಚು ಕಂಟೈನ್ಮೆಂಟ್ ಜೋನ್’ಗಳಿದ್ದು, ವಿದ್ಯಾರ್ಥಿಗಳು ಎಲ್ಲಿ ಹೋಗಲು ಸಾಧ್ಯ? ಅವರು ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಹೇಳಿರುವ ಹೈಕೋರ್ಟ್ ಸಿಇಟಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ರಾಜ್ಯ ಸರಕಾರಕ್ಕೆ ಸೂಚಿಸಿದೆ. ಅಷ್ಟೇ ಅಲ್ಲದೆ, ಬುಧವಾರ ಮಧ್ಯಾಹ್ನ 2.30 ಗಂಟೆಯೊಳಗೆ ಉತ್ತರ ನೀಡುವಂತೆ ಸರಕಾರಕ್ಕೆ ಸೂಚಿಸಿದೆ.

ಪರೀಕ್ಷೆ ನಡೆಸಬಹುದು ಎಂದ ಅಧಿಕಾರಿಗಳು

ಎಲ್ಲ ಜಿಲ್ಲೆಗಳಲ್ಲೂ, ಗಡಿನಾಡಿನಲ್ಲೂ ಪರೀಕ್ಷೆ ನಡೆಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೈಗೊಳ್ಳಲಾದ ರೀತಿಯಲ್ಲಿಯೇ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಆರೋಗ್ಯ, ಸಾರಿಗೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳೆಲ್ಲರೂ ಪರೀಕ್ಷೆ ನಡೆಸುವುದಕ್ಕೆ ಸಮಸ್ಯೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರಿಷ್ಕೃತ ವಾಗಿರುವ ಎಸ್’ಒಪಿ ಪ್ರಕಾರ ಈಗ ಕಂಟೈನ್ಮೆಂಟ್ ಜೋನ್’ನಲ್ಲಿ ಇರುವ ಪರೀಕ್ಷಾರ್ಥಿ ಅವರ ಪೋಷಕರೊಬ್ಬರು ಹೊರಬರಬಹುದು. ಪಾಸಿಟೀವ್ ಬಂದಿರುವ ಆಭ್ಯರ್ಥಿಗಳಿಗೆ ಪ್ರತ್ಯೇಕ ಕೋಠಡಿಯಲ್ಲಿ ಪರೀಕ್ಷೆ ಗೆ ಕೂರುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಎ ಸಿಂಪ್ಟಮೇಟಿಕ್ ಮತ್ತು ಕೆಮ್ಮು, ಶೀತದ ಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಡಿಸಿಎಂ ಅವರಿಗೆ ಮಾಹಿತಿ ನೀಡಿದರು. ಇವರ ಜತೆಗೆ, ವಿಡಿಯೋ ಸಭೆಯಲ್ಲಿ ಹಾಜರಿದ್ದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೂ ಸೇರಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕೂಡ ಪರೀಕ್ಷೆ ನಡೆಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ನ್ಯಾಯಾಲಯ ಉಲ್ಲೇಖಿಸಿರುವ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.
ಒಂದು ಸಣ್ಣ ಸಮಸ್ಯೆಯೂ ಇಲ್ಲದೆ, ಸಿಇಟಿ ವಿದ್ಯಾರ್ಥಿಗಳಿಗಿಂತ ಕಿರಿಯ ವಯಸ್ಸಿನ ಎಸ್ಸೆಸ್ಸೆಲ್ಸಿ ಮಕ್ಕಳಿಗೇ ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಉದಾಹರಣೆ ನಮ್ಮ ಮುಂದೆಯೇ ಇದೆ. ಗಡಿನಾಡು ಸೇರಿ ಎಲ್ಲ ಕೇಂದ್ರಗಳಲ್ಲಿಯೂ ಕೋವಿಡ್ ಹಿನ್ನೆಲೆಯಲ್ಲಿ ಸ್ಯಾನಿಟೈಸೇಷನ್, ದೈಹಿಕ ಅಂತರ, ಕೊಠಡಿಗಳ ನಿರ್ವಹಣೆ, ಆಂಬ್ಯುಲನ್ಸ್, ಸಾರಿಗೆ ಸೇರಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಯ ಕ್ಷೇಮವನ್ನೂ ಗಮನದಲ್ಲಿ ಇಟ್ಟುಕೊಂಡು ನಿಗಾ ವಹಿಸಲಾಗುತ್ತಿದೆ ಎಂದು ಎಲ್ಲ ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನಾಳೆ ನ್ಯಾಯಾಲಯಕ್ಕೆ ಮಾಹಿತಿ

ಸಭೆಯಲ್ಲಿ ವ್ಯಕ್ತವಾದ ಎಲ್ಲ ಮಾಹಿತಿಯನ್ನು ಸಂಗ್ರಹ ಮಾಡಿದ ನಂತರ ಮಾತನಾಡಿದ ಡಿಸಿಎಂ ಅವರು, ಇದಿಷ್ಟೂ ಮಾಹಿತಿಯನ್ನು ಬುಧವಾರ ಅಂದರೆ ನಾಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಡ್ವೋಕೇಟ್ ಜನರಲ್ ಅವರ ಮುಖೇನ ನ್ಯಾಯಾಲಯಕ್ಕೆ ಸಭೆಯಲ್ಲಿ ವ್ಯಕ್ತವಾದ ಎಲ್ಲ ಬಗೆಯ ಅಭಿಪ್ರಾಯಗಳನ್ನು ಅರಿಕೆ ಮಾಡಿಕೊಳ್ಳಲಿದೆ. ಅಂತಿಮವಾಗಿ ನ್ಯಾಯಾಲಯ ನೀಡುವ ಸೂಚನೆಯನ್ನು ಸರಕಾರ ಚಾಚೂ ತಪ್ಪದೇ ಪಾಲಿಸುತ್ತದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ರಾಜ್ಯ ಮಟ್ಟದಲ್ಲಿ ಸಾರಿಗೆ, ಆರೋಗ್ಯ, ಶಿಕ್ಷಣ, ಉನ್ನತ ಶಿಕ್ಷಣ, ಪೊಲೀಸ್ ಇಲಾಖೆಗಳ ಉನ್ನತ ಅಧಿಕಾರಿಗಳು ಒಳಗೊಂಡ ತಂಡ ರಚಿಸಲಿದ್ದು, ಇಡೀ ಪರೀಕ್ಷೆಯ ಉಸ್ತುವಾರಿಯನ್ನು ಈ ತಂಡ ನೋಡಿಕೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಎಇಡಿ) ಕಾರ್ಯ ನಿರ್ವಾಹಕ ನಿರ್ದೇಶಕ ವೆಂಕಟರಾಜ ಸೇರಿದಂತೆ ಸಾರಿಗೆ, ಆರೋಗ್ಯ, ಶಿಕ್ಷಣ, ಉನ್ನತ ಶಿಕ್ಷಣ, ಪೊಲೀಸ್ ಇಲಾಖೆಗಳ ಉನ್ನತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


Spread the love

Leave a Reply

Your email address will not be published. Required fields are marked *