ಸಿಸಿಟಿವಿ ದೃಶ್ಯ ಆಧರಿಸಿ ನಡೆದಿತ್ತು ದಾಳಿ: ಬೆಂಗಳೂರು ಪೊಲೀಸರು ನೀಡಿದ ದೂರಿನಲ್ಲಿ ಸಂಪೂರ್ಣ ವಿವರ

ಧಾರವಾಡ: ರಾಜಧಾನಿಯಲ್ಲಿ ನಡೆಯುತ್ತಿರುವ ನಿರಂತರ ಸರಗಳ್ಳತನ ಪ್ರಕರಣವನ್ನ ಭೇದಿಸಲು ರಚನೆಯಾದ ವಿಶೇಷ ತಂಡದ ಸದಸ್ಯರೇ ಧಾರವಾಡದ ಜನ್ನತನಗರದ ಇಬ್ಬರನ್ನ ಹಿಡಿಯಲು ಬಂದಿದ್ದಾಗಿ ದೂರಿನಲ್ಲಿ ಹೇಳಿದ್ದು, ಆಗ ಆರೋಪಿತರು ಸೇರಿದಂತೆ ಇನ್ನೂ ಮೂವರು ಹಲ್ಲೆ ಮಾಡಿ, ಕೊಲೆ ಮಾಡುವ ಯತ್ನ ನಡೆಸಿದರೆಂದು ದೂರು ದಾಖಲು ಮಾಡಿದ್ದಾರೆ.
ಧಾರವಾಡದ ಸಂಗಮ ವೃತ್ತದಲ್ಲಿ ನಡೆದ ಘಟನೆಯ ಬಗ್ಗೆ ಶಹರ ಠಾಣೆಯಲ್ಲಿ ದೂರು ನೀಡಿರುವ ಮಾಗಡಿ ರಸ್ತೆಯ ಪೊಲೀಸ್ ಠಾಣೆ ಎಎಸ್ಐ ರವಿಕುಮಾರ, ಹಾಲಿಯಾಗಿ ಎಸಿಪಿ ಸ್ಕ್ವಾಡನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಎಸ್ಐ ರವಿಕುಮಾರ ನೀಡಿರುವ ದೂರಿನಲ್ಲಿ, ಧಾರವಾಡ ಜನ್ನತನಗರದ ಜಾಫರ ಇರಾಣಿ ಮತ್ತು ಇಂಜಮಾಮ ಇರಾಣಿಯನ್ನ ಬಂಧನ ಮಾಡಲು ಬಂದಿದ್ದು, ಆಗ ಇಬ್ಬರು ಆರೋಪಿಗಳ ಜೊತೆಗೆ ಇನ್ನೂ ಮೂವರು ಕೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಬೀರ್ ಬಾಟಲಿಯಿಂದ ಪಿಎಸೈ ಸಂತೋಷ ಅವರಿಗೆ ಹೊಡೆದಿದ್ದಾರೆ. ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾರೆಂದು ಸಂಪೂರ್ಣವಾಗಿ ಘಟನೆಯ ಬಗ್ಗೆ ದೂರಿನಲ್ಲಿ ವಿವರ ನೀಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ಶ್ರೀಧರ ಸತಾರೆ, ಆರೋಪಿತರ ಮೇಲೆ ಕಲಂ 143, 147, 148, 323, 324, 353, 307 ಜೊತೆಗೆ ಐಪಿಸಿ 149 ಪ್ರಕಾರ ಕೇಸ್ ದಾಖಲು ಮಾಡಿ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿಎಸೈ ಸಂತೋಷ ಅವರು ಸ್ವಲ್ಪ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಮರಳಲಿದ್ದಾರೆಂದು ಹೇಳಲಾಗಿದೆ.